ಉತ್ತರಪ್ರದೇಶ: ಉಪ ಕಾರ್ಮಿಕ ಆಯುಕ್ತರ ಪತ್ನಿಗೆ 1 ಕೋಟಿ ರೂ. ವಂಚಿಸಿದ ಆರೋಪದ ಮೇರೆಗೆ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ.
ಇನ್ಸ್‌ಪೆಕ್ಟರ್ ನರ್ಗಿಸ್ ಖಾನ್ ಮತ್ತು ಆಕೆಯ ಪತಿ ಸುರೇಶ್ ಯಾದವ್ ಅವರನ್ನು ಮಂಗಳವಾರ ಬೆಳಗ್ಗೆ ಲಖನೌದ ಅಲಿಗಂಜ್ ಪ್ರದೇಶದಲ್ಲಿ ಘಾಜಿಯಾಬಾದ್‌ನ ಕವಿ ನಗರ ಪೊಲೀಸರು ಅರೆಸ್ಟ್ ಮಾಡಿದರು.
ಉಪ ಕಾರ್ಮಿಕ ಆಯುಕ್ತ ರೋಷನ್‌ಲಾಲ್ ಅವರ ಪತ್ನಿ ಉಮಾದೇವಿ ಅವರಿಗೆ ಪೆಟ್ರೋಲ್ ಪಂಪ್ ನಡೆಸಲು ಹಣದ ನೆರವು ನೀಡುವ ನೆಪದಲ್ಲಿ 1 ಕೋಟಿಗೂ ಅಧಿಕ ಮೊತ್ತವನ್ನು ನರ್ಗಿಸ್ ಖಾನ್, ಸುರೇಶ್ ಯಾದವ್, ಖಾಲಿದ್ ರಾವೂಫ್, ಜಿತೇಂದ್ರ ಸಿಂಗ್ ವೊಹ್ರಾ ಮತ್ತು ಸೋಂಪಾಲ್ 2018 ರಲ್ಲಿ ಪಡೆದುಕೊಂಡಿದ್ದಾರೆ.
ಹಣ ಮರಳಿಸದ ಹಿನ್ನೆಲೆಯಲ್ಲಿ ಉಮಾದೇವಿ ಈ ವರ್ಷದ ಫೆಬ್ರವರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ನರ್ಗಿಸ್ ಖಾನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಜೊತೆಗೆ ಸೆಪ್ಟೆಂಬರ್ 23 ರಂದು ಖಾನ್ ಸಹೋದರ ಖಾಲಿದ್ ರವೂಫ್ ಎಂಬಾತನನ್ನೂ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಿಪುನ್ ಅಗರ್ವಾಲ್ ತಿಳಿಸಿದ್ದಾರೆ.