ಮುಂಬೈ: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುಂಬೈ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ನವೆಂಬರ್ 23ಕ್ಕೆ ಮುಂದೂಡಿದೆ.
ನ್ಯಾಯಾಧೀಶರು ಅಧ್ಯಕ್ಷತೆ ವಹಿಸದ ಕಾರಣ ಮನವಿಯನ್ನು ವಿಚಾರಣೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಅರ್ನಬ್ ಪರ ವಕೀಲ ಶ್ಯಾಮ್ ಕಲ್ಯಾಣ್ಕರ್ ಹೇಳಿದ್ದಾರೆ."ಅರ್ನಬ್ ಮತ್ತು ಅವರ ಪತ್ನಿ ಅವರ ಜಾಮೀನು ಅರ್ಜಿಯನ್ನು ನವೆಂಬರ್ 23 ರವರೆಗೆ ಮುಂದೂಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಸುಪ್ರೀಂಕೋರ್ಟ್‌ನ ವಿವರವಾದ ಆದೇಶಕ್ಕಾಗಿ ನಾವು ಕಾಯುತ್ತಿರುವುದರಿಂದ ನಾವು ಇಂದು ಬಂಧನದಿಂದ ಯಾವುದೇ ಮಧ್ಯಂತರ ರಕ್ಷಣೆ ಪಡೆಯಲಿಲ್ಲ ಎಂದು ಕಲ್ಯಾಣ್ಕರ್ ಹೇಳಿದ್ದಾರೆ.
2018 ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅರ್ನಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದೆ. ನವೆಂಬರ್ 4 ರಂದು ಬಂಧನಕ್ಕೊಳಗಾದ ಗೋಸ್ವಾಮಿ ಅವರನ್ನು ಬುಧವಾರ ಸಂಜೆ ತಾಲೋಜ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಕಳೆದ ವಾರ, ಅರ್ನಬ್ ಅವರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ತೆರಳಿದ ವೇಳೆ ಅರ್ನಬ್ ಮತ್ತು ಅವರ ಪತ್ನಿ ಸಮ್ಯಬ್ರತಾ ರೇ ಗೋಸ್ವಾಮಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಪ್ರಸ್ತುತ, ಗೋಸ್ವಾಮಿ ಮತ್ತು ಅವರ ಪತ್ನಿ, ಹಲ್ಲೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.