ಪುಣೆ (ಮಹಾರಾಷ್ಟ್ರ): ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೋಪರ್ಡಿಯಲ್ಲಿ ನಡೆದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಅಪರಾಧಿ ಯರವಾಡ ಜೈಲಿನಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಮುಖ ಅಪರಾಧಿಯಾಗಿದ್ದ ಜಿತೇಂದ್ರ ಶಿಂಧೆ ಸಾವಿಗೆ ಶರಣಾದ ವ್ಯಕ್ತಿ.
ಘಟನೆಯ ವಿವರ: ಜುಲೈ 13, 2016ರಂದು ಅಹ್ಮದ್‌ನಗರದ ಕೋಪರ್ಡಿ ವ್ಯಾಪ್ತಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯಿಂದ ಮಹಾರಾಷ್ಟ್ರ ಬೆಚ್ಚಿ ಬಿದ್ದಿತ್ತು. ಅಪರಾಧಿಗಳ ವಿರುದ್ಧ ಮಹಾರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಪ್ರತಿಭಟನಾ ಮೆರವಣಿಗೆಗಳು ನಡೆದಿದ್ದವು. ಜಿತೇಂದ್ರ ಶಿಂಧೆ ಎಂಬಾತ ಈ ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದು, ಪುಣೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಈತ ಭಾನುವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಶಿಂಧೆ ಮಾನಸಿಕ ಅಸ್ವಸ್ಥನಾಗಿದ್ದ. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮರಾಠಾ ಸಮುದಾಯ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗಳಿಗೆ ವ್ಯಾಪಕ ಬೆಂಬಲವೂ ಸಿಕ್ಕಿತ್ತು. ಮೂವರು ಅಪರಾಧಿಗಳನ್ನು ಗಲ್ಲಿಗೇರಿಸಿದರೆ ಮಾತ್ರ ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಸಂತ್ರಸ್ತೆಯ ಕುಟುಂಬದವರು ಆಗ್ರಹಿಸಿದ್ದರು. ಅಂತಿಮವಾಗಿ ಅಹ್ಮದ್‌ನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಎಲ್ಲಾ ಮೂವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಪ್ರಕರಣದ ಪ್ರಮುಖ ಆರೋಪಿ ಜಿತೇಂದ್ರ ಅಲಿಯಾಸ್ ಪಪ್ಪು ಶಿಂಧೆ, ನಿತಿನ್ ಭೈಲುಮೆ ಮತ್ತು ಸಂತೋಷ್ ಮಾವಲ್ ಎಂಬ ಮೂವರು ಪ್ರಕರಣದ ಅಪರಾಧಿಗಳಾಗಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ರಸ್ತೆ ಅಪಘಾತ; ತಮಿಳುನಾಡಿನ 7 ಮಹಿಳೆಯರು ಸಾವು