ಜೈಪುರ(ರಾಜಸ್ಥಾನ): ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಪ್ರತಿಭಟನೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ವಿದ್ಯಾಧರ್ ನಗರ ಕ್ರೀಡಾಂಗಣದಲ್ಲಿ ‘ಮೆಹಂಗೈ ಹಠಾವೋ ಎಂಬ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಂಡಿದೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ಹಿರಿಯ ಮುಖಂಡರು ಈ ರ್ಯಾಲಿಯಲ್ಲಿ ಭಾಗವಹಿಸುತ್ತಾರೆ. ರಾಹುಲ್ ಗಾಂಧಿ ಮಧ್ಯಾಹ್ನ 12 ಗಂಟೆಗೆ ಜೈಪುರ ತಲುಪಲಿದ್ದಾರೆ. ಅಲ್ಲಿಂದ ರ‍್ಯಾಲಿ ಸ್ಥಳಕ್ಕೆ ಆಗಮಿಸಲಿದ್ದಾರೆ.
ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಹಣದುಬ್ಬರದ ವಿರುದ್ಧ ಕಾಂಗ್ರೆಸ್ ಪಕ್ಷ ಎತ್ತಿರುವ ಧ್ವನಿ ಇಡೀ ದೇಶದ ಜನರನ್ನು ತಲುಪಲಿದೆ. ಜನರು ಇಷ್ಟೊಂದು ತೊಂದರೆ ಅನುಭವಿಸುತ್ತಿದ್ದರೂ ಕೇಂದ್ರ ಸರ್ಕಾರ ಏಕೆ ಹಣದುಬ್ಬರ ತಡೆಗೆ ಕ್ರಮಕೈಗೊಂಡಿಲ್ಲ ಎಂಬುದು ಗೊತ್ತಾಗಬೇಕಿದೆ. ಮೆಹಂಗೈ ಹಠಾವೋ ರ‍್ಯಾಲಿ ಕೇಂದ್ರದ ಬಿಜೆಪಿ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ, ಗುಜರಾತ್ ಮತ್ತು ಪಂಜಾಬ್ ಸೇರಿದಂತೆ ಮುಂದಿನ ವರ್ಷ ನಡೆಯಲಿರುವ ಏಳು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ರ‍್ಯಾಲಿ ಮಹತ್ವದ್ದಾಗಿದೆ.
ಇದನ್ನೂ ಓದಿ: ಧರ್ಮದ ಹೆಸರಲ್ಲಿ ಸಮುದಾಯವನ್ನು ಭಯಪಡಿಸುವವರು ಜಿಹಾದಿಗಳಲ್ಲ, ಫಸಾದಿಗಳು: ಕೇರಳ ರಾಜ್ಯಪಾಲ