ನವದೆಹಲಿ: ಭಾರತ ಇದೇ ಮೊದಲ ಬಾರಿಗೆ ಅಧ್ಯಕ್ಷತೆ ವಹಿಸಿರುವ ಮಹತ್ವದ ಜಿ20 ಶೃಂಗಸಭೆಗೆ ದಿನಗಣನೆ ಆರಂಭವಾಗಿದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದಿನಿಂದ ಒಂದು ವಾರ ಕಾಲ ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಜಿ20 ಮುಗಿದ ಬಳಿಕ ಅವರು ಸ್ವದೇಶಕ್ಕೆ ವಾಪಸ್ ಆಗಲಿದ್ದಾರೆ. ನಿನ್ನೆ ರಾತ್ರಿಯೇ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಎರಡು ದಿನ ಜಿ 20 ಶೃಂಗಸಭೆ ನಡೆಯಲಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್ ಪ್ರಧಾನಿ ಮ್ಯಾಕ್ರಮ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ದೇಶದಲ್ಲಿ ವಿಶ್ವಮನ್ನಣೆಯ ಕಾರ್ಯಕ್ರಮ ಜರುಗುತ್ತಿದ್ದರೆ, ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿ ಅಲ್ಲಿರುವ ಅನಿವಾಸಿ ಭಾರತೀಯರ ಜೊತೆ ಸಂವಾದ, ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ರಾಹುಲ್ ಪ್ರವಾಸದಲ್ಲಿ ಏನೇನು?: ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7 ರಂದು ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಯೂನಿಯನ್ (ಇಯು) ವಕೀಲರು ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಲಿದ್ದಾರೆ. ನಂತರ ಅವರು ಹೇಗ್‌ನಲ್ಲಿ ಅಂಥದ್ದೇ ಮತ್ತೊಂದು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ಯಾರಿಸ್‌ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸೆಪ್ಟೆಂಬರ್ 9 ರಂದು ಅವರು ಫ್ರಾನ್ಸ್ ರಾಜಧಾನಿ ಪ್ಯಾರೀಸ್ನಲ್ಲಿ ಲೇಬರ್ ಯೂನಿಯನ್‌ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 10 ರಂದು ನಾರ್ವೆಗೆ ಭೇಟಿ ನೀಡಲಿರುವ ರಾಹುಲ್ ಗಾಂಧಿ, ಓಸ್ಲೋ ನಗರದಲ್ಲಿ ನಡೆಯುವ ಅನಿವಾಸಿ ಭಾರತೀಯರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದರ ಮರುದಿನ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 9-10 ರಂದು ನಡೆಯುವ ಜಿ20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ನವದೆಹಲಿ ಶೃಂಗಾರಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವ ನಾಯಕರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಭಾರತ ಜಿ20 ಗುಂಪಿನ ಪ್ರಸ್ತುತ ಅಧ್ಯಕ್ಷ ಸ್ಥಾನ ವಹಿಸಿದೆ. ಶೃಂಗಸಭೆಗೆ 30ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಐರೋಪ್ಯ ಒಕ್ಕೂಟದ ಉನ್ನತ ಅಧಿಕಾರಿಗಳು, 14 ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇತರ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.
'ಭಾರತ'ಕ್ಕಾಗಿ ಗುದ್ದಾಟ : ಇದೇ ವೇಳೆ ಇಂಡಿಯಾ ಮತ್ತು ಭಾರತ ಪದ ಬಳಕೆ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಗುದ್ದಾಟ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿ20 ಸಭೆಗೆ ಆಗಮಿಸುತ್ತಿರುವ ಎಲ್ಲ ನಾಯಕರ ಆಹ್ವಾನ ಪತ್ರಿಕೆ ಮತ್ತು ಅಧಿಕೃತ ಪತ್ರ ವ್ಯವಹಾರಗಳಲ್ಲಿ 'ಭಾರತ' ಎಂದು ನಮೂದಿಸುತ್ತಿದೆ. ಇದು ಹೊಸದಾಗಿ ಇಂಡಿಯಾ ಎಂದು ಮೈತ್ರಿಕೂಟ ರಚನೆ ಮಾಡಿಕೊಂಡಿರುವ ವಿಪಕ್ಷಗಳಿಗೆ ಸಿಟ್ಟು ತರಿಸಿದ್ದು, ಟೀಕೆ ವ್ಯಕ್ತಪಡಿಸುತ್ತಿವೆ.
ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನದಲ್ಲಿ ಈ ಕುರಿತು ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಂವಿಧಾನದಲ್ಲಿ ಅಡಕವಾಗಿರುವ ಇಂಡಿಯಾ ಪದವನ್ನು ಕೈಬಿಟ್ಟು ಭಾರತ ಪದವನ್ನು ಮಾತ್ರ ಉಳಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಇದನ್ನೂ ಓದಿ: INDIA vs Bharat... ಈ ಎರಡೂ ಹೆಸರುಗಳ ಸುತ್ತಲಿನ ಇತಿಹಾಸ ಏನು.. ಏನಿದರ ಸಂಕ್ಷಿಪ್ತ ನೋಟ!