ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಇಲ್ಲಿನ ಜಂತರ್ ಮಂತರ್‌ನಲ್ಲಿ ಭೇಟಿ ಮಾಡಿ, ಬೆಂಬಲ ನೀಡಿದರು.
ಮಹಿಳಾ ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸಿದ ಕಾಂಗ್ರೆಸ್ ನಾಯಕಿ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿದರು. ಅಲ್ಲದೇ, ಸರ್ಕಾರವೇ ಸಿಂಗ್ ಅವರನ್ನು ರಕ್ಷಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
-
#WATCH | Congress leader Priyanka Gandhi Vadra meets the wrestlers protesting against WFI chief & BJP MP Brij Bhushan Sharan Singh at Jantar Mantar, Delhi pic.twitter.com/KzKkk4uuU4
— ANI (@ANI) April 29, 2023 " class="align-text-top noRightClick twitterSection" data="
">#WATCH | Congress leader Priyanka Gandhi Vadra meets the wrestlers protesting against WFI chief & BJP MP Brij Bhushan Sharan Singh at Jantar Mantar, Delhi pic.twitter.com/KzKkk4uuU4
— ANI (@ANI) April 29, 2023#WATCH | Congress leader Priyanka Gandhi Vadra meets the wrestlers protesting against WFI chief & BJP MP Brij Bhushan Sharan Singh at Jantar Mantar, Delhi pic.twitter.com/KzKkk4uuU4
— ANI (@ANI) April 29, 2023
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರತಿಯನ್ನು ಕುಸ್ತಿಪಟುಗಳಿಗೆ ನೀಡಬೇಕು. ಇವರು ಕೂಟಗಳಲ್ಲಿ ಪದಕಗಳನ್ನು ಗೆದ್ದಾಗ ಎಲ್ಲರೂ ಟ್ವೀಟ್ ಮಾಡುತ್ತಾರೆ. ನಮ್ಮ ದೇಶದ ಹೆಮ್ಮೆ ಎಂದೆಲ್ಲಾ ಹೊಗಳುತ್ತಾರೆ. ಆದರೆ ಈಗ ಅವರು ರಸ್ತೆಯ ಮೇಲೆ ಅನ್ಯಾಯದ ವಿರುದ್ಧ ಪ್ರತಿಭಟನೆಗೆ ಕುಳಿತಾಗ ಮಾತ್ರ ಯಾರೂ ಕೇಳಲು ಸಿದ್ಧರಿಲ್ಲ. ಪೊಲೀಸರು ಎಫ್ಐಆರ್ ದಾಖಲಿಸಿದರೂ, ಅದರ ಪ್ರತಿಯನ್ನು ನೀಡಿಲ್ಲ. ಅದನ್ನು ಕುಸ್ತಿಪಟುಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕುಸ್ತಿ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಕರೆ ನೀಡಿದ ಪ್ರಿಯಾಂಕಾ ಗಾಂಧಿ, ಸಿಂಗ್ ವಿರುದ್ಧ ಗಂಭೀರ ಆರೋಪಗಳಿವೆ. ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಹುದ್ದೆಯಿಂದ ತೆಗೆದುಹಾಕಬೇಕು. ಇಲ್ಲವಾದಲ್ಲಿ ಅವರು ತನಿಖೆಯ ಮೇಲೆ ಒತ್ತಡ ಹೇರುವ ಸಾಧ್ಯತೆ ಇರುತ್ತದೆ. ಕುಸ್ತಿಪಟುಗಳ ವೃತ್ತಿಜೀವನವನ್ನು ನಾಶಪಡಿಸುವ ಮತ್ತು ಒತ್ತಡ ಹೇರುವ ಹುದ್ದೆಯಲ್ಲಿದ್ದರೆ, ದಾಖಲಾದ ಎಫ್‌ಐಆರ್‌ಗಳು ಮತ್ತು ತನಿಖೆಗೆ ಅರ್ಥವೇನಿದೆ ಎಂದು ಪ್ರಶ್ನಿಸಿದರು.
ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಅವರ ಅಧಿಕಾರವನ್ನು ಕಸಿದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು. "ಪ್ರಧಾನಿಯಿಂದ ನನಗೆ ಯಾವುದೇ ನಿರೀಕ್ಷೆಗಳಿಲ್ಲ, ಏಕೆಂದರೆ ಅವರು ಈ ಕುಸ್ತಿಪಟುಗಳ ಬಗ್ಗೆ ಕಾಳಜಿ ವಹಿಸಿದ್ದರೆ, ಅವರು ಕನಿಷ್ಠ ಅವರನ್ನು ಕರೆದು ಅವರೊಂದಿಗೆ ಮಾತನಾಡುತ್ತಿದ್ದರು. ಅವರು ಪದಕಗಳನ್ನು ಗೆದ್ದಾಗ ಅವರನ್ನು ಚಹಾಕ್ಕೆ ಕರೆದಿದ್ದರು. ಆದ್ದರಿಂದ ಅವರನ್ನು ಕರೆ ಮಾಡಿ, ಅವರೊಂದಿಗೆ ಮಾತನಾಡಿ, ಅವರು ನಮ್ಮ ಹುಡುಗಿಯರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಟೀಕೆ: ಕುಸ್ತಿಪಟುಗಳ ನ್ಯಾಯಯುತ ಬೇಡಿಕೆಯನ್ನು ಪರಿಗಣಿಸಲು ಮುಂದಾಗದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ ಗಾಂಧಿ, ನೀವು ಅಪರಾಧಿಯನ್ನು ಉಳಿಸಲು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಪಿಟಿ ಉಷಾರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಗೌರವವನ್ನು ಹೆಚ್ಚಿಸುವ ಕ್ರೀಡಾಪಟುಗಳಿಗೆ ಆದ ಅನ್ಯಾಯವನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ. ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರೇ ಆಟಗಾರರನ್ನು ಜರಿಯವುದು ಸರಿಯಲ್ಲ. ಸರ್ಕಾರ ಮತ್ತ ಪಕ್ಷದ ದುರಹಂಕಾರದ ಪ್ರತೀಕವಾಗಿದೆ. ಪ್ರತಿಭಟನಾಕಾರರ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ ಎಂದು ದೂರಿದರು.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರಾದ ಭೂಪಿಂದರ್ ಹೂಡಾ, ದೀಪೇಂದರ್ ಹೂಡಾ ಮತ್ತು ಉದಿತ್ ರಾಜ್ ಅವರು ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಬೆಂಬಲ ನೀಡಿದ್ದರು.
ದೂರು ನೀಡಿ 4 ದಿನ ಕಳೆದರೂ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿರಲಿಲ್ಲ. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ ದೆಹಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಸೇರಿದಂತೆ 2 ಎಫ್ಐಆರ್ ದಾಖಲಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗವೂ ಪೊಲೀಸರಿಗೆ ನೋಟಿಸ್ ನೀಡಿ ಎಫ್ಐಆರ್ ದಾಖಲಿಗೆ ಸೂಚಿಸಿತ್ತು.
ಓದಿ: ಪಿಟಿ ಉಷಾ ಅವರೇ ನಮಗೆ ಸ್ಫೂರ್ತಿ.. ಆದರೆ, ಅವರ ಹೇಳಿಕೆ ಸಂವೇದನಾರಹಿತ: ಕುಸ್ತಿಪಟುಗಳ ಅತೃಪ್ತಿ