ETV Bharat / bharat

ಲೋಕಸಭೆ ಚುನಾವಣೆ ಗೆಲ್ಲಲು 8 ರಾಜ್ಯದಲ್ಲಿ ಚುನಾವಣಾ ಸಮಿತಿ ರಚಿಸಿದ ಕಾಂಗ್ರೆಸ್ - ಚುನಾವಣಾ ಸಮಿತಿಗಳ ರಚನೆ

ಲೋಕಸಭೆ ಸಮರ ಗೆಲ್ಲಲು ಪಕ್ಷದ ಹಿಡಿತ ಇರುವ ರಾಜ್ಯಗಳಲ್ಲಿ ಚುನಾವಣಾ ಸಮಿತಿಗಳನ್ನು ರಚನೆ ಮಾಡಿ, ಈಗಿನಿಂದಲೇ ತಯಾರಿ ನಡೆಸಲು ಕಾಂಗ್ರೆಸ್​ ನಿರ್ಧರಿಸಿದೆ.

ಲೋಕಸಭೆ ಸಮರ
ಲೋಕಸಭೆ ಸಮರ
author img

By PTI

Published : Jan 7, 2024, 2:07 PM IST

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಈಗನಿಂದಲೇ ತಯಾರಿ ನಡೆಸುತ್ತಿರುವ ಕಾಂಗ್ರೆಸ್​ ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ತೆಲಂಗಾಣ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾಗಳಲ್ಲಿ ಪ್ರದೇಶ ಚುನಾವಣಾ ಸಮಿತಿಗಳನ್ನು ರಚಿಸಿದೆ. ಮಧ್ಯಪ್ರದೇಶದಲ್ಲಿ ರಾಜಕೀಯ ವ್ಯವಹಾರಗಳ ಸಮಿತಿಯನ್ನೂ ರಚಿಸಿದೆ. ಇವೆಲ್ಲವೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಮೋದನೆ ನೀಡಲಾಗಿದೆ.

ರಾಜಸ್ಥಾನ ಸಮಿತಿ: ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷರಾದ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌, ಮಹೇಂದ್ರಜೀತ್ ಸಿಂಗ್ ಮಾಳವೀಯ, ಮೋಹನ್ ಪ್ರಕಾಶ್, ಸಿ.ಪಿ.ಜೋಶಿ, ಹರೀಶ್ ಚೌಧರಿ, ರಾಮಲಾಲ್ ಜಾಟ್ ಸೇರಿದಂತೆ ಹಲವರು ಇದ್ದಾರೆ.

ಕೇರಳ ಸಮಿತಿ: ಕೇರಳದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಇರಾದೆಯೊಂದಿಗೆ ಕೆ.ಸುಧಾಕರ್​ ಅವರನ್ನು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರೆ, ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ಕೆ.ಸಿ.ವೇಣುಗೋಪಾಲ್, ರಮೇಶ್ ಚೆನ್ನಿತ್ತಲ, ವಯಲಾರ್ ರವಿ, ವಿ.ಡಿ.ಸತೀಶನ್, ಕೆ.ಸುರೇಶ್, ಶಶಿ ತರೂರ್ ಮತ್ತು ಮುಲ್ಲಪಲ್ಲಿ ರಾಮಚಂದ್ರನ್ ಸೇರಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷರು, ಎನ್‌ಎಸ್‌ಯುಐ ಅಧ್ಯಕ್ಷರು, ಸೇವಾದಳದ ಮುಖ್ಯ ಸಂಘಟಕರು ಮತ್ತು ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.

ತೆಲಂಗಾಣ ಸಮಿತಿ: ತೆಲಂಗಾಣದಲ್ಲಿ ಅಧಿಕಾರ ಹಿಡಿದಿರುವ ಕೈ ಪಕ್ಷ ಲೋಕಸಭೆಯಲ್ಲೂ ಪ್ರಭಾವ ಮುಂದುವರಿಸಲು, ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಉಪಮುಖ್ಯಮಂತ್ರಿ ಭಟ್ಟಿವಿಕ್ರಮಾರ್ಕ ಮಲ್ಲು ಸದಸ್ಯರಾಗಿ, ಉತ್ತಮ್ ಕುಮಾರ್ ರೆಡ್ಡಿ ಮತ್ತು ವಿ.ಹನುಮಂತ ರಾವ್ ಸಮಿತಿಯಲ್ಲಿದ್ದಾರೆ.

ಹಿಮಾಚಲ ಪ್ರದೇಶ ಸಮಿತಿ: ಹಿಮಾಚಲ ಪ್ರದೇಶದಲ್ಲಿ ಪಿಸಿಸಿ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇರಲಿದ್ದು, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಮತ್ತು ಆನಂದ್ ಶರ್ಮಾ, ವಿಪ್ಲೋವ್ ಠಾಕೂರ್, ಆಶಾ ಕುಮಾರಿ, ರಾಮ್ ಲಾಲ್ ಠಾಕೂರ್, ಠಾಕೂರ್ ಕೌಲ್ ಸೇರಿ ಹಲವು ಹಿರಿಯ ನಾಯಕರನ್ನು ಸಮಿತಿ ಹೊಂದಿರಲಿದೆ.

ಮಧ್ಯಪ್ರದೇಶದಲ್ಲಿ ಎರಡು​ ಸಮಿತಿ: ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯಲು ಭಾರಿ ಪೈಪೋಟಿ ನಡೆಸಿ, ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್​, ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಕಟ್ಟಲು ಎರಡು ಸಮಿತಿಗಳನ್ನು ರಚಿಸಿದೆ. ಜಿತು ಪಟ್ವಾರಿ ನೇತೃತ್ವದಲ್ಲಿ ಚುನಾವಣಾ ಸಮಿತಿ ರೂಪಿಸಿದ್ದು, ಅದರಲ್ಲಿ ದಿಗ್ವಿಜಯ ಸಿಂಗ್, ವಿವೇಕ್ ಟಂಖಾ, ಸುರೇಶ್ ಪಚೌರಿ, ಕಾಂತಿಲಾಲ್ ಭೂರಿಯಾ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಇರಲಿದ್ದಾರೆ.

ಇದರೊಂದಿಗೆ ರಾಜಕೀಯ ವ್ಯವಹಾರಗಳ ಸಮಿತಿಯನ್ನೂ ರಚಿಸಿದ್ದು, ಅದು ರಾಜ್ಯದ ಎಐಸಿಸಿ ಉಸ್ತುವಾರಿ ಜಿತೇಂದ್ರ ಸಿಂಗ್ ಅವರ ನೇತೃತ್ವದಲ್ಲಿರುತ್ತದೆ. ಕಮಲ್ ನಾಥ್, ದಿಗ್ವಿಜಯ ಸಿಂಗ್, ಅರುಣ್ ಯಾದವ್, ವಿವೇಕ್ ತಂಖಾ ಮತ್ತು ನಕುಲ್ ನಾಥ್ ಸದಸ್ಯರಾಗಿದ್ದರೆ, ಜಿತು ಪಟ್ವಾರಿ ಸಂಚಾಲಕರಾಗಿರುತ್ತಾರೆ. ಛತ್ತೀಸ್‌ಗಢದ ಸಮಿತಿಗೆ ದೀಪಕ್ ಬೈಜ್​, ಮಣಿಪುರದಲ್ಲಿ ಕೆ.ಮೇಘಚಂದ್ರ ಸಿಂಗ್, ನಾಗಾಲ್ಯಾಂಡ್​ನಲ್ಲಿ ಎಸ್.ಸುಪೊಂಗ್ಮೆರೆನ್ ಜಮೀರ್ ಅವರನ್ನು ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ: ಅದ್ಭುತ ವಿದೇಶಾಂಗ ನೀತಿಗೆ 'ರಾಮಾಯಣ'ದ ನಿದರ್ಶನ ಕೊಟ್ಟ ಡಾ.ಎಸ್.ಜೈಶಂಕರ್​

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.