ನವದೆಹಲಿ: ಕೋಮು ದ್ವೇಷವನ್ನು ಹರಡುತ್ತಿರುವ ಆರೋಪದ ಮೇಲೆ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಮತ್ತು ಸರ್ಕಾರೇತರ ಸಂಘಟನೆಯೊಂದರ ವಿರುದ್ಧ ದೆಹಲಿ ಪೊಲೀಸ್ ಸೈಬರ್ ಸೆಲ್ನಲ್ಲಿ ದೂರು ದಾಖಲಾಗಿದೆ.
ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ದೆಹಲಿಯ ಸೈಬರ್ ಸೆಲ್ಗೆ ದೂರು ನೀಡಿದ್ದು ಟ್ವಿಟರ್ ಇಂಡಿಯಾದ ಎಂಡಿ ಮನೀಶ್ ಮಹೇಶ್ವರಿ, ಟ್ವಿಟರ್ ಇಂಡಿಯಾದ ಪಬ್ಲಿಕ್ ಪಾಲಿಸಿ ಮ್ಯಾನೇಜರ್ ಶಗುಫ್ತಾ ಕಮ್ರಾನ್ ಮತ್ತು ರಿಪಬ್ಲಿಕ್ ಏಥಿಸ್ಟ್ನ ಸ್ಥಾಪಕರಾದ ಅರ್ಮಿನ್ ನವಾಬಿ, ಸಿಇಓ ಆದ ಸುಸನ್ನಾ ಮ್ಯಾಕಿಂಟೈರ್ ವಿರುದ್ಧ ದೂರು ದಾಖಲಿಸಿದ್ದಾರೆ.
ರಿಪಬ್ಲಿಕ್ ಏಥಿಸ್ಟ್ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಳಿ ದೇವಿಯ ಚಿತ್ರ ಆಕ್ಷೇಪಾರ್ಹವಾಗಿರುವುದು ಮಾತ್ರವಲ್ಲದೇ, ಸಮಾಜದಲ್ಲಿ ನಿಂದನೀಯ, ಅಸಹನೀಯ, ದ್ವೇಷಮಯ ವಾತಾವರಣವನ್ನು ಸೃಷ್ಟಿಮಾಡುತ್ತದೆ. ಈ ರೀತಿಯ ಕೋಮು ಭಾವನೆ ಪ್ರಚೋದಿಸುವ ಸಲುವಾಗಿ ಆಕ್ಷೇಪಾರ್ಹ ಚಿತ್ರವೊಂದನ್ನು ಪೋಸ್ಟ್ ಮಾಡಲಾಗಿದೆ ಎಂದು ದೂರುದಾರರು ತಾವು ನೀಡಿರುವ ದೂರಿನಲ್ಲಿ ಆಕ್ಷೇಪಿಸಿದ್ದಾರೆ.
2011ರಿಂದ ಏಥಿಸ್ಟ್ ರಿಪಬ್ಲಿಕ್ ಈ ರೀತಿಯ ನಿಂದನಾತ್ಮಕ ಪೋಸ್ಟ್ಗಳನ್ನು ಹಾಕುತ್ತಿದೆ. ಈ ಪೋಸ್ಟ್ಗಳಲ್ಲಿ ಹಿಂದೂ ಧರ್ಮ ಮತ್ತು ಇತರ ಧರ್ಮಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಆದರೂ ಟ್ವಿಟರ್ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಭಾರತೀಯ ಕಾನೂನುಗಳನ್ನು ಟ್ವಿಟರ್ ಉಲ್ಲಂಘಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಚಾಕುವಿನಿಂದ ಬೆದರಿಸಿ, ಹೆಂಡತಿಗಾಗಿ ಸೀರೆ ಕದ್ದವನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದೂರು ದಾಖಲು
ಇದು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 79ರ ಮತ್ತು 1860ರ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಕೀಲ ಆದಿತ್ಯ ಸಿಂಗ್ ದೇಶ್ವಾಲ್ ಆರೋಪಿಸಿದ್ದಾರೆ.