ನದೆವಹಲಿ: ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಶಾಂತಿ ಮತ್ತು ಸ್ಥಿರತೆ, ಸಂಚಾರ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಭಾರತ ಒತ್ತು ನೀಡಿದೆ ಎಂದು ವಿದೇಶಾಂಗ ಇಲಾಖೆಯ ಪೂರ್ವ ರಾಷ್ಟ್ರಗಳ ಕಾರ್ಯದರ್ಶಿ ರಿವಾ ಗಂಗೂಲಿ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಪೂರ್ವ ಏಷ್ಯಾ ಶೃಂಗಸಭೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ರಿವಾ ಗಂಗೂಲಿ ಈ ರೀತಿಯಾಗಿ ಸ್ಪಷ್ಟನೆ ನೀಡಿದ್ದು, ಚೀನಾ ದೇಶವು ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಲು ಮುಂದಾಗುತ್ತಿರುವ ಈ ವೇಳೆಯಲ್ಲಿ ಭಾರತ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಬ್ರೂನೈನಲ್ಲಿ ಪೂರ್ವ ಏಷ್ಯಾ ಶೃಂಗಸಭೆಯ ಹಿರಿಯ ಅಧಿಕಾರಿಗಳ ಶೃಂಗಸಭೆ ನಡೆಸಿದ್ದು, ಬ್ರೂನೈನ ಕಾರ್ಯದರ್ಶಿ ಎಚ್.ಇ.ಎಮಲೀನ್ ಅಬ್ದುಲ್ ರಹಮಾನ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯು 18ನೇ ಪೂರ್ವ ಏಷ್ಯಾ ಶೃಂಗಸಭೆಯಾಗಿದ್ದು, ಪೂರ್ವ ಏಷ್ಯಾ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪೂರ್ವ ಏಷ್ಯಾ ಶೃಂಗಸಭೆಯನ್ನು ಬಲಪಡಿಸುವುದು. ಮುಂಬರುವ ಸವಾಲುಗಳು ಒಟ್ಟಾಗಿ ಎದುರಿಸುವುದು ಮುಂತಾದವುಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅತ್ಯಂತ ಮುಖ್ಯವಾಗಿ ಕೋವಿಡ್, ಕೋವಿಡ್ ನಂತರದಲ್ಲಿ ಚೇತರಿಕೆ, ದಕ್ಷಿಣ ಚೀನಾ ಸಮುದ್ರ, ಕೊರಿಯನ್ ಪರ್ಯಾಯ ದ್ವೀಪ, ಮ್ಯಾನ್ಮಾರ್‌ನಲ್ಲಿನ ಬೆಳವಣಿಗೆಗಳು ಮತ್ತು ಭಯೋತ್ಪಾದನೆ ಮುಂತಾದ ವಿಚಾರಗಳ ಬಗ್ಗೆ ದೇಶಗಳು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡವು.
ಇದನ್ನೂ ಓದಿ: ಅಮೆರಿಕನ್ನರ ಸರಾಸರಿ ಜೀವಿತಾವಧಿ ಇಳಿಕೆ: ವಿವಿಧ ವರ್ಣೀಯರಲ್ಲೂ ಭಿನ್ನ, ಭಿನ್ನ..
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಪೂರ್ವ ಏಷ್ಯಾ ಶೃಂಗಸಭೆ ಶ್ರಮಿಸುತ್ತಿದೆ ಎಂದು ಈ ವೇಳೆ ರಿವಾ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಯನ್ಮಾರ್ ದಂಗೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅಲ್ಲಿನ ಸಂಘರ್ಷವನ್ನು ಕೊನೆಗಾಣಿಸಲು ರಚನಾತ್ಮಕ ಕ್ರಿಯೆಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು. ಅಂತಾರಾಷ್ಟ್ರೀಯ ಕಾನೂನಿನ ಅಡಿಗೆ ದಕ್ಷಿ ಚೀನಾ ಸಮುದ್ರ ಒಳಪಡಬೇಕು ಎಂದು ಪ್ರತಿಪಾದಿಸಿದರು.
ಪೂರ್ವ ಏಷ್ಯಾ ಶೃಂಗಸಭೆಯ ಬಗ್ಗೆ..
ಪರಸ್ಪರ ಸಹಕಾರಕ್ಕಾಗಿ ಪ್ರತಿವರ್ಷ ನಡೆಸುವ ಶೃಂಗಸಭೆಯಾಗಿದ್ದು, ಭಾರತ ಮತ್ತು ಚೀನಾ ಸೇರಿದಂತೆ ಸುಮಾರು 16 ರಾಷ್ಟ್ರಗಳು ಈ ಸದಸ್ಯತ್ವ ವಹಿಸಿಕೊಂಡು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತವೆ.
1991ರಲ್ಲಿ ಮಲೇಷಿಯಾದ ಪ್ರಧಾನಿ ಮಹತೀರ್ ಮೊಹಮದ್ ಈ ಶೃಂಗಸಭೆಯ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದು, ಮೊದಲ ಶೃಂಗಸಭೆ 2005ರ ಡಿಸೆಂಬರ್ನಲ್ಲಿ ಮಲೇಷಿಯಾದ ಕೌಲಲಾಂಪುರ್ನಲ್ಲಿ ನಡೆಯಿತು.