ನವದೆಹಲಿ: 2023ರ ರಾಜಸ್ಥಾನ ವಿಧಾನಸಭಾ ಚುನಾವಣೆಯ ಸಮರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ಮುಂದಿನ ಸಿಎಂ ಅಭ್ಯರ್ಥಿಯ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಈ ಬೆನ್ನಲ್ಲೇ ಸಿಎಂ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯೊಂದು ರಾಜಕೀಯ ಬಿಸಿ ಹೆಚ್ಚಿಸಿದೆ.
ಹೌದು, ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್ ಅವರು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದು, ತಾವು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. "ಮುಖ್ಯಮಂತ್ರಿ ಹುದ್ದೆ ತೊರೆಯುತ್ತೇನೆ ಎಂದು ಹೇಳುವ ಧೈರ್ಯ ಹೊಂದಿರುವ ದೇಶದ ಏಕೈಕ ಸಿಎಂ ನಾನು. ಆದರೆ, ಈ ಹುದ್ದೆ ನನ್ನನ್ನು ಬಿಡುತ್ತಿಲ್ಲ, ಮುಂದೆಯೂ ನನ್ನನ್ನು ಬಿಡುವುದಿಲ್ಲ" ಎಂದು ಹೇಳಿದರು.
1998ರಲ್ಲಿ ಸೋನಿಯಾ ಗಾಂಧಿ ನನ್ನನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದಾಗ ನಾನು ಆ ಸಮಯದಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಅಂದು ರಾಜಸ್ತಾನದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದವರು ಸಿಎಂ ಆಗಲೇ ಇಲ್ಲ. 1998ರ ನಂತರ ನಾವು 2003ರ ಚುನಾವಣೆಯಲ್ಲಿ ಸೋತಿದ್ದೇವೆ, ಆದರೆ, 2008 ರಲ್ಲಿ ಪಕ್ಷ ನನಗೆ ಮತ್ತೊಂದು ಅವಕಾಶ ನೀಡಿತು. ಇನ್ನು 2013ರ ಚುನಾವಣೆಯಲ್ಲಿ ಸಹ ಸೋತಿದ್ದು, 2018 ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ಪಕ್ಷ ನೀಡಿದೆ ಎಂದು ಹೇಳಿದರು.
ಪಕ್ಷಕ್ಕೆ ನನ್ನ ಮೇಲೆ ನಂಬಿಕೆ ಇದೆ : ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಆರೋಗ್ಯ ಯೋಜನೆ ನಮ್ಮ ರಾಜಸ್ಥಾನದ್ದು ಎಂದು ನನಗೆ ಹೆಮ್ಮೆ ಇದೆ. ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ಬಯಸುತ್ತೇನೆ ಎಂದು ಹೇಳಿದಾಗಲೆಲ್ಲ ಈ ಸಿಎಂ ಹುದ್ದೆ ನನ್ನನ್ನು ಬಿಡುತ್ತಿಲ್ಲ. ಇದರ ಅರ್ಥ ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನನ್ನ ಮೇಲೆ ವಿಶ್ವಾಸವಿಟ್ಟುಕೊಂಡಿದ್ದು, ಮುಖ್ಯಮಂತ್ರಿಯಾಗುವ ಅವಕಾಶ ನನಗೇ ಸಿಗುತ್ತಿದೆ ಎಂಬುದಕ್ಕೆ ಇದೇ ಕಾರಣವಿರಬೇಕು. ಹುದ್ದೆಗಿಂತಲೂ ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ರಾಹುಲ್ ಗಾಂಧಿ ಅವರ ಕೈ ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ನನ್ನ ಆದ್ಯತೆಯೂ ಅದೇ ಆಗಿದೆ. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಚುನಾವಣೆ ನಂತರ ಪಕ್ಷ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ ಎಂದರು.
ಇನ್ನು ಸಚಿನ್ ಪೈಲಟ್ ಜತೆಗಿನ ಸಂಬಂಧದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನನ್ನ ಮತ್ತು ಸಚಿನ್ ಪೈಲಟ್ ನಡುವೆ ಏಕೆ ಜಗಳ ಆಗುತ್ತಿಲ್ಲ ಎಂಬ ಚಿಂತೆ ಬಿಜೆಪಿಗಿದೆ. ಆದರೆ, ನಾವು ತೆಗೆದುಕೊಂಡ ಎಲ್ಲ ನಿರ್ಧಾರಗಳಲ್ಲೂ ಪೈಲಟ್ ಅವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅವರ ಬೆಂಬಲಿಗರ ನಿರ್ಧಾರಗಳನ್ನು ಸಹ ಗಮನಿಸಲಾಗುತ್ತಿದೆ. ನಾವು ಹಳೆಯ ಸಮಸ್ಯೆಗಳನ್ನು ಮರೆತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಬಯಸುತ್ತೇವೆ ಎಂದರು.
ಇದನ್ನೂ ಓದಿ : ಮಧ್ಯಪ್ರದೇಶ 230 ಶಾಸಕರ ಪೈಕಿ 93 ಎಂಎಲ್ಎಗಳ ಮೇಲಿದೆ ಕ್ರಿಮಿನಲ್ ಕೇಸ್ : ಇದರಲ್ಲಿ ಈ ಪಕ್ಷದ ಶಾಸಕರೇ ಹೆಚ್ಚಂತೆ !