ಅಮೃತಸರ: ಕ್ರಿಮಿನಲ್ ಪ್ರಕರಣಗಳು ಮತ್ತು ಕೋಮುಗಲಭೆ ಸೃಷ್ಟಿಸಿದ್ದ ಆರೋಪಿ ಲಾಂಡಾ ಹರಿಕೆಯ ಇಬ್ಬರು ಆಪ್ತರನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಪಂಜಾಬ್‌ನಲ್ಲಿ ಬಂಧಿಸಿದೆ. ಇವರಿಬ್ಬರು ಖಲಿಸ್ತಾನಿ ಭಯೋತ್ಪಾದನೆಯಲ್ಲೂ ತೊಡಗಿಸಿಕೊಂಡಿದ್ದರು. ರಾಜನ್ ಭಟ್ಟಿ ಮತ್ತು ಚೀನಾ ಬಂಧಿತರು.
ಆರೋಪಿ ರಾಜನ್ ಭಟ್ಟಿ ಹೆಸರಿನಲ್ಲಿ 15ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪಂಜಾಬ್ ಪೊಲೀಸರಿಗೂ ಬೇಕಾಗಿದ್ದ ಈತನ ವಿರುದ್ಧ ಮೊಹಾಲಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೆಹಲಿ ಪೊಲೀಸ್‌ನ ಕೌಂಟರ್ ಇಂಟೆಲಿಜೆನ್ಸ್ನ ವಿಶೇಷ ಪಡೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಿದೆ. ಖಲಿಸ್ತಾನಿ ಭಯೋತ್ಪಾದಕ ಜಾಲದ ವಿರುದ್ಧ ಎಚ್ಚರಿಕೆ ರವಾನಿಸಲಾಗಿದೆ.
ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳಾದ ಲಾಂಡಾ ಹರಿಕೆ ಮತ್ತು ಹರ್ವಿಂದರ್ ಸಿಂಗ್ ರಿಂಡಾ ಅವರ ಸೂಚನೆಯ ಮೇರೆಗೆ ಚೀನಾ ಮತ್ತು ರಾಜನ್ ಭಟ್ಟಿ ಪಂಜಾಬ್‌ನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಹತ್ಯೆ ಮತ್ತು ಕೋಮು ಗಲಭೆ ಸೃಷ್ಟಿಸುವ ಮೂಲಕ ಸಮಾಜಘಾತುಕ ಕೆಲಸದಲ್ಲಿ ತೊಡಗಿದ್ದರು. ಇವರ ವಿರುದ್ಧ 15ಕ್ಕೂ ಅಧಿಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಆರೋಪಿ ರಾಜನ್ ಭಟ್ಟಿ ನೀಡಿದ ಮಾಹಿತಿ ಮೇರೆಗೆ ಪಂಜಾಬ್ ಮತ್ತು ದೆಹಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕನ್ವಾಲ್ಜಿತ್ ಸಿಂಗ್ ಅಲಿಯಾಸ್ ಮಖು ಫಿರೋಜ್ಪುರ್ ಎಂಬಾತನನ್ನೂ ಬಂಧಿಸಲಾಗಿದೆ.
ಆರೋಪಿಗಳು ಬಿಯಾಸ್ ಅಮೃತಸರ ಗ್ರಾಮಾಂತರ ಪೊಲೀಸ್ ಠಾಣಾ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಪಂಜಾಬ್ ಪೊಲೀಸರೊಂದಿಗೆ, ದೆಹಲಿ ಪೊಲೀಸರು ದಾಳಿ ನಡೆಸಿದರು. ಬಂಧಿಸಲು ಪ್ರಯತ್ನಿಸುತ್ತಿರುವಾಗ ಇಬ್ಬರು ಆರೋಪಿಗಳು ಜಂಟಿ ಪೊಲೀಸ್ ಪಡೆಯ ಮೇಲೆಯೇ ಗುಂಡು ಹಾರಿಸಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ಸುತ್ತುವರಿದಿದ್ದಾರೆ.
ಈ ಗುಂಡಿನ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರ ಕಾಲಿಗೆ ಗುಂಡು ತಾಕಿದೆ. ಆದರೂ ಬೆಂಬಿಡದ ಪೊಲೀಸರು ಆರೋಪಿಗಳನ್ನು ಸಜೀವವಾಗಿ ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಮಾಸ್ಟರ್ಮೈಂಡ್ ಸುಳಿವಿಗೆ ಬಹುಮಾನ: ಪಂಜಾಬ್ನ ಮೊಹಾಲಿ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆಸಿದ, 12 ಭಯೋತ್ಪಾದನಾ ಪ್ರಕರಣಗಳ ಮಾಸ್ಟರ್ ಮೈಂಡ್ ಆಗಿರುವ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಘೋಷಿಸಿದೆ.
ಪಂಜಾಬ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ರಿಂಡಾ, ಪಾಕಿಸ್ತಾನದಲ್ಲಿ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಆಶ್ರಯದಲ್ಲಿ ನೆಲೆಸಿದ್ದಾನೆ ಎಂದು ತಿಳಿದುಬಂದಿದೆ. ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ)ನ ಸ್ವಯಂ ಘೋಷಿತ ಮುಖ್ಯಸ್ಥನಾಗಿದ್ದಾನೆ.
ರಿಂಡಾ ಮೂಲತಃ ತರನ್ ತಾರನ್‌ನ ರಟ್ಟೋಕೆ ಗ್ರಾಮಕ್ಕೆ ಸೇರಿದವನಾದರೂ, ಈತನ ಶಾಶ್ವತ ವಿಳಾಸವು ಮಹಾರಾಷ್ಟ್ರದ ನಾಂದೇಡ್‌ನಲ್ಲಿದೆ. ಈತನ ಗ್ಯಾಂಗ್ ಇನ್ನೂ ನಾಂದೇಡ್‌ನಲ್ಲಿ ಸಕ್ರಿಯವಾಗಿದೆ. ಮೇ ತಿಂಗಳಲ್ಲಿ ಈತನ ತಂಡದ ಇಬ್ಬರು ಸದಸ್ಯರು ಗುಪ್ತಚರ ಪ್ರಧಾನ ಕಚೇರಿಯ ಮೇಲೆ ಆರ್‌ಪಿಜಿ ಎಸೆದಿದ್ದರು.
ತಲೆಮರೆಸಿಕೊಂಡಿರುವ ಆರೋಪಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಆತನ ಬಂಧನಕ್ಕೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.