ವಿಜಯವಾಡ( ಆಂಧ್ರಪ್ರದೇಶ): ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ವಿಜಯವಾಡದ ವಿದ್ಯಾರ್ಥಿಯೊಬ್ಬನ ಪತ್ರಕ್ಕೆ ಉತ್ತರ ನೀಡಿ ಅಚ್ಚರಿ ಮೂಡಿಸಿದ್ದಾರೆ. ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ಎನ್.ವಿ. ರಮಣ ಅವರಿಗೆ ದರ್ಶಿತ ಹೆಸರಿನ ಕಾಲೇಜು ವಿದ್ಯಾರ್ಥಿಯು ತೆಲುಗು ಭಾಷೆಯಲ್ಲಿ ಅಭಿನಂದನಾ ಪತ್ರ ಬರೆದಿದ್ದ. ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಜೀವನ ಮಾದರಿಯಾಗಿದೆ ಎಂದು ಆತ ಉಲ್ಲೇಖಿಸಿದ್ದ.
"ಸ್ವಪ್ರಯತ್ನದಿಂದ ಮೇಲೆ ಬಂದ ವ್ಯಕ್ತಿ ತಾವಾಗಿರುವಿರಿ. ಅತ್ಯಂತ ಕಡಿಮೆ ಸೌಲಭ್ಯಗಳಿದ್ದ ಪೊನ್ನಾವರಂ ಎಂಬ ಹಳ್ಳಿಯವರಾದರೂ, ತಾವು ದೇಶದ ಉನ್ನತ ಹುದ್ದೆಗೆ ಏರಿರುವಿರಿ. ಎಲ್ಲೆಡೆ ಇಂಗ್ಲಿಷ್ ಭಾಷೆಯು ಪ್ರಭುತ್ವ ಮೆರೆಯುತ್ತಿರುವ ಈ ಕಾಲದಲ್ಲಿ ತೆಲುಗು ಭಾಷೆಯಲ್ಲಿ ನ್ಯಾಯಾಲಯದ ತೀರ್ಪು ನೀಡುವ ತಮ್ಮ ಕಾರ್ಯ ಶ್ಲಾಘನೀಯ." ಎಂದು ವಿದ್ಯಾರ್ಥಿಯು ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದ.
ಈ ಪತ್ರಕ್ಕೆ ನ್ಯಾಯಮೂರ್ತಿ ರಮಣ ಮಾರುತ್ತರ ನೀಡಿದ್ದು, ಅತ್ಯಂತ ಸುಂದರವಾದ ತೆಲುಗು ಹಸ್ತಾಕ್ಷರಗಳಲ್ಲಿ ಬರೆದ ನಿಮ್ಮ ಪತ್ರವನ್ನು ಓದಿ ಖುಷಿಯಾಯಿತು. ನಿಮ್ಮ ವಿದ್ಯಾಭ್ಯಾಸ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಲಿ. ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಿ ಎಂದು ಹಾರೈಸಿದ್ದಾರೆ.