ನವದೆಹಲಿ: ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯುದ್ದಕ್ಕೂ ಚೀನಿ ವಾಯುಪಡೆ ವಾಸ್ತವ್ಯ ಹೂಡಿದ್ದು, ನಮ್ಮ ಸೈನಿಕರನ್ನೂ ಆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ತಿಳಿಸಿದ್ದಾರೆ.
ಇಂದು ಭಾರತೀಯ ವಾಯುಸೇನೆಯ 89ನೇ ವಾರ್ಷಿಕೋತ್ಸವದ ಹಿನ್ನೆಲೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಚೌಧರಿ, ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಏನೆಂದರೆ, ಈಗಲೂ ಕೂಡ ಚೀನಾದ ಸೈನಿಕರು ಮೂರು ವಾಯುನೆಲೆಗಳಲ್ಲಿ ಇದ್ದಾರೆ. ಯಾವುದೇ ಸವಾಲು ಎದುರಿಸಲು ನಾವು ಸಿದ್ಧರಾಗಿದ್ದು, ನಮ್ಮ ಸೇನೆ ಸಂಪೂರ್ಣವಾಗಿ ನಿಯೋಜನೆಗೊಂಡಿದೆ ಎಂದು ಮಾಹಿತಿ ನೀಡಿದರು.
ಭಾರತದ ಪೂರ್ವ ಲಡಾಖ್ ಸಮೀಪವಿರುವ ಚೀನಾದ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ನೈಟ್ ಡ್ರಿಲ್ ಸೇರಿದಂತೆ ಸೇನಾ ಸಮರಾಭ್ಯಾಸವನ್ನು ಹೆಚ್ಚಿಸಿದೆ. ರಾತ್ರಿ ವೇಳೆ ಸುಮಾರು 5,000 ಮೀಟರ್ (16,400 ಅಡಿ) ಎತ್ತರದ ಪ್ರದೇಶದಲ್ಲಿ ಲೈವ್-ಫೈರ್ ಮಷಿನ್ ಗನ್ ಡ್ರಿಲ್‌ಗಳನ್ನು ಪಿಎಲ್‌ಎ ಅಭ್ಯಾಸ ಮಾಡುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.
ಇದನ್ನೂ ಓದಿ: ಗಡಿ ಭಾಗದಲ್ಲಿ ಚೀನಿ ಸೈನಿಕರ ನೈಟ್ ಡ್ರಿಲ್.. 16,400 ಅಡಿ ಎತ್ತರ ಪ್ರದೇಶದಲ್ಲಿ ಸಮರಾಭ್ಯಾಸ
ಈ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೌಧರಿ, ಬಹು ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಗಳನ್ನು ಆರಂಭಿಸುವ ಚೀನಾದ ಸಾಮರ್ಥ್ಯವು ದುರ್ಬಲವಾಗಿಯೇ ಉಳಿಯಲಿದೆ. ರಫೇಲ್, ಅಪಾಚೆಗಳ ಸೇರ್ಪಡೆಯು ನಮ್ಮ ಯುದ್ಧ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಅಲ್ಲದೇ ನಮ್ಮ ವಿರೋಧಿಗಳ ಮೇಲೆ ಕಣ್ಣಿಟ್ಟಿರಲು, ಅವರ ವಿರುದ್ಧ ಹೋರಾಡಲು ಐಎಎಫ್ ಹೊಸ ಯುದ್ಧ ವ್ಯವಸ್ಥೆಗಳ ಪ್ರಕ್ರಿಯೆಯಲ್ಲಿದೆ ಎಂದರು.
ಕಳೆದ ಸೆಪ್ಟೆಂಬರ್ 30 ರಂದು ವಾಯುಸೇನೆ ಮುಖ್ಯಸ್ಥರಾಗಿದ್ದ ಆರ್. ಕೆ.ಎಸ್.ಬದೌರಿಯಾ ಸೇವೆಯಿಂದ ನಿವೃತ್ತರಾಗಿದ್ದರು. ಬಳಿಕ ವಿ.ಆರ್ ಚೌಧರಿ ಅವರು ವಾಯುಪಡೆ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.