ನವದೆಹಲಿ: ಗಡಿ ಸಮಸ್ಯೆಯನ್ನು ಜೀವಂತವಾಗಿಡುವುದು ಚೀನಾದ ಉದ್ದೇಶ ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ. ಇದೇನೇ ಇರಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನಾ ಪಡೆಗಳು ಸನ್ನದ್ಧವಾಗಿದ್ದು, ವಾಸ್ತವ ನಿಯಂತ್ರಣ ರೇಖೆಯಲ್ಲಿ ಸಮರ್ಪಕ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಗಲ್ವಾನ್ ಕಣಿವೆಯಲ್ಲಿನ ಘಟನೆ ಪೂರ್ವದಲ್ಲಿ ಅಂದರೆ ಏಪ್ರಿಲ್ 2020 ರ ಮೊದಲಿನಂತೆ ಯಥಾಸ್ಥಿತಿಯನ್ನು ಪುನಃಸ್ಥಾಪಿಸುವುದು ಸೇನೆಯ ಗುರಿಯಾಗಿದೆ ಎಂದಿರುವ ಪಾಂಡೆ, ಗಡಿಯಲ್ಲಿ ನಿಯೋಜಿಸಲಾದ ಪಡೆಗಳಿಗೆ ಯಾವುದೇ ಕಾರಣಕ್ಕೂ ಅಂಜದಂತೆ ಹಾಗೂ ದೃಢವಾಗಿರುವಂತೆ ಮಾರ್ಗದರ್ಶನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಪಡೆಗಳು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಆಯಾಕಟ್ಟಿನ ಸ್ಥಳಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರೆಸಿದೆ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆಯು "ಸದೃಢ ನಿಲುವು" ಹೊಂದಿದೆ ಎಂದು ಸೇನಾ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ. ಒಂದು ದೇಶವಾಗಿ ನಮಗೆ ಬೇಕಾಗಿರುವುದು ದೇಶದ ಗಡಿ ರಕ್ಷಣೆ ಹಾಗೂ ವೈರಿಗಳನ್ನು ಹಿಮ್ಮೆಟ್ಟಿಸುವುದೇ ಸೇನೆಯ ಮೊದಲ ಗುರಿ ಎಂದು ಅವರು ಇದೇ ವೇಳೆ ಹೇಳಿದರು.
ಒಂದು ವಾರದ ಹಿಂದೆಯಷ್ಟೇ ಜನರಲ್ ಪಾಂಡೆ ಅವರು ಭೂ ಸೇನಾ ಪಡೆಯ ನೇತೃತ್ವ ವಹಿಸಿಕೊಂಡಿದ್ದಾರೆ. ಈಗಾಗಲೇ ಚೀನಾದೊಂದಿಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಬಗೆಹರಿಯದ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ಒಮ್ಮತದ ತೀರ್ಮಾನಕ್ಕೆ ಬರಲು ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ:ಅಸ್ಸೋಂ ಪ್ರವಾಸದಲ್ಲಿ ಅಮಿತ್ ಶಾ... ಇಂಡೋ-ಬಾಂಗ್ಲಾ ಗಡಿ ಭದ್ರತೆ ಪರಿಶೀಲನೆ