ನವದೆಹಲಿ: ಚೀನಾ ತನ್ನ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಮುಂದುವರೆಸುತ್ತಿದೆ. ಟಿಬೆಟ್ ಸ್ವಾಯುತ್ತ ಪ್ರದೇಶದಲ್ಲಿರುವ ಭೂತಾನ್ಗೆ ಸಮೀಪದಲ್ಲಿರುವ ಚುಂಬಿ ಕಣಿವೆಯಲ್ಲಿ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈಶಾನ್ಯ ಭಾರತದ ರಾಜ್ಯಗಳಲ್ಲಿ ಪರಸ್ಪರ ಸಂಪರ್ಕ ಕಲ್ಪಿಸುವ ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿ ಈ ಚುಂಬಿ ಕಣಿವೆ ಇದೆ. ಇದು ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವು ದಿನಗಳ ಹಿಂದಷ್ಟೇ ಭಾರತೀಯ ಸೇನೆಯ ಪೂರ್ವ ವಲಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಸಿಲಿಗುರಿ ಸೂಕ್ಷ್ಮ ಪ್ರದೇಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಚೀನಾದ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳ ಕುರಿತು ಅಮೆರಿಕಾ ಸಂಸತ್ತು 2021ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತ ಮತ್ತು ಚೀನಾದ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆಯುತ್ತಿವೆ. ಅದರ ಹೊರತಾಗಿಯೂ ಎಲ್ಎಸಿಯಲ್ಲಿ ಚೀನಾ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿದೆ ಹಾಗೂ ಯುದ್ಧತಂತ್ರ ರೀತಿಯ ಕ್ರಮಗಳನ್ನು ಕೈಗೊಂಡಿದೆ ವರದಿಯಲ್ಲಿ ಉಲ್ಲೇಖಿಸಿದೆ.
ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿರುವ ಈ ಚುಂಬಿ ಕಣಿವೆಯಲ್ಲಿ ಚೀನಾ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ನಡೆಯಿಂದ ಭಾರತ ನಿರ್ಮಾಣ ಮಾಡುತ್ತಿರುವ ಸಿಲಿಗುರಿ ಕಾರಿಡಾರ್ ಮೇಲೆ ಅಧಿಕ ಒತ್ತಡ ಉಂಟಾಗಲಿದೆ ಎಂದು ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೋರ್ಸಾ ನದಿ ಪ್ರದೇಶದ ಉದ್ದಕ್ಕೂ ಚೀನಾ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವ ಹೈ ರೆಸಲ್ಯೂಷನ್ ಸ್ಯಾಟಲೈಟ್ ಇಮೇಜ್ಗಳೂ ಬಹಿರಂಗವಾಗಿದ್ದು, ಚೀನಾದ ಆಕ್ರಮಣಕಾರಿ ನೀತಿಗೆ ಮತ್ತಷ್ಟು ಸಾಕ್ಷಿ ಒದಗಿಸುವಂತಿವೆ. ಇತ್ತೀಚೆಗಷ್ಟೇ ಚೀನಾ ಮತ್ತು ಭೂತಾನ್ ನಡುವೆ ಮೂರು ಹಂತದ ರಸ್ತೆ (Three-step road) ನಿರ್ಮಾಣ ವಿಚಾರವಾಗಿ ಒಪ್ಪಂದವೊಂದು ನಡೆದಿದ್ದು, ರಸ್ತೆಗಳ ನಿರ್ಮಾಣಕ್ಕೆ ಮತ್ತಷ್ಟು ವೇಗ ದೊರೆತಿದೆ.
ಗುಪ್ತಚರ ಮಾಹಿತಿಯ ಪ್ರಕಾರ, ಚೀನಾ ತನ್ನ ಪೀಪಲ್ಸ್ ಲಿಬರೇಶನ್ ಆರ್ಮಿಗೆ ಆಗಸ್ಟ್‌ನಲ್ಲಿ ನೇಮಕಾತಿ ಆರಂಭಿಸಿತ್ತು. ಈ ವೇಳೆ ಸುಮಾರು 400 ಟಿಬೆಟಿಯನ್ ವ್ಯಕ್ತಿಗಳ ಚುಂಬಿ ಕಣಿವೆಯಲ್ಲಿ ನೇಮಿಸಿಕೊಂಡಿತ್ತು. ಪ್ರತಿ ಕುಟುಂಬದಲ್ಲಿ ಕನಿಷ್ಠ ಒಬ್ಬರನ್ನು ಪೀಪಲ್ಸ್ ಲಿಬರೇಶನ್ ಆರ್ಮಿಗೆ ನೇಮಿಸಿಕೊಳ್ಳುವ ಉದ್ದೇಶಿಸಲಾಗಿದೆ ಎಂದು ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಟಿಬೆಟ್ ಸ್ವಾಯುತ್ತ ಪ್ರದೇಶದ ಫಾರಿ ಝೋಂಗ್ ಮತ್ತು ಯಾತುಂಗ್‌ನಿಂದ ಹೊಸದಾಗಿ ನೇಮಕಗೊಂಡವರು ಲಾಸಾದಲ್ಲಿನ ಪೀಪಲ್ಸ್ ಲಿಬರೇಶನ್ ಆರ್ಮಿಯಲ್ಲಿ ಒಂದು ವರ್ಷದ ತರಬೇತಿಗೆ ಒಳಗಾಗುತ್ತಾರೆ. ನಂತರ ಅವರನ್ನು ಭಾರತ- ಚೀನಾ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ವಂಚನೆ: ಬೆಂಗಳೂರಿನಲ್ಲಿ ಮೂವರ ಬಂಧನ