ಭಟಪಾರಾ( ಛತ್ತೀಸ್ಗಢ): ಬೆಳ್ಳಂಬೆಳಗ್ಗೆ ಛತ್ತೀಸ್‌ಗಢದ ರಾಜ್ಯದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಭಟಪಾರಾದ ಖಮಾರಿಯಾ ಗ್ರಾಮದ ಬಳಿ ಲಾರಿ ಮತ್ತು ಪಿಕ್ ಅಪ್ ಸರಕು ವಾಹನದ ನಡುವೆ ಡಿಕ್ಕಿ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಸ್ತೆ ಅಪಘಾತದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟಪಾರಾ ಆಸ್ಪತ್ರೆ ಮತ್ತು ಬಲೋಡಾ ಬಜಾರ್‌ಗೆ ದಾಖಲಿಸಲಾಗಿದೆ. ತಡರಾತ್ರಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಟಪಾರಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೃತ ಪಟ್ಟವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಎಸ್‌ಐ ಸಂಜೀವ್ ಸಿಂಗ್ ರಜಪೂತ್ ತಿಳಿಸಿದ್ದಾರೆ. ಸತ್ತವರ ನಿಖರ ಸಂಖ್ಯೆಯನ್ನು ತಿಳಿಯಲು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಬಲೋಡಾ ಬಜಾರ್ ಎಸ್ಪಿ ದೀಪಕ್ ಝಾ ಅವರು 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಒಂದೇ ಕುಟುಂಬದ 11 ಮಂದಿ ಸಾವು: ಪಿಕಪ್ ವಾಹನದಲ್ಲಿದ್ದ ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಿಲೋರಾ ಗ್ರಾಮದಿಂದ ಅರ್ಜುನಿ ಗ್ರಾಮಕ್ಕೆ ತೆರಳಿದ್ದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಭಟಪಾರ ಪೊಲೀಸರು ತಡರಾತ್ರಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಈ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 11 ಜನ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ವಾಹನದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಲೋದಬಜಾರ್ ಎಸ್ಪಿ ದೀಪಕ್ ಝಾ ಅವರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಿಕಪ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ: ಕಾರ್ಯಕ್ರಮ ಮುಗಿಸಿ ಸಂಬಂಧಿಕರು ಪಿಕಪ್ ವಾಹನದಲ್ಲಿ ಅರ್ಜುನಿಯಿಂದ ತಮ್ಮ ಗ್ರಾಮ ಖಿಲೋರಾಗೆ ಹಿಂತಿರುಗುತ್ತಿದ್ದರು. ಈ ಮಧ್ಯೆ, ರಾತ್ರಿ 12 ಗಂಟೆ ಸುಮಾರಿಗೆ ಖಮಾರಿಯಾದ ಡಿಪಿಡಬ್ಲ್ಯುಎಸ್ ಶಾಲೆಯ ಬಳಿ ವೇಗವಾಗಿ ಬಂದ ಟ್ರಕ್ ಮತ್ತು ಪಿಕಪ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಉರುಳಿ ಬಿದ್ದಿತ್ತು.
ಗ್ರಾಮಕ್ಕೆ ವಾಪಸ್ ಆಗುತ್ತಿದ್ದ ವೇಳೆ ಅವಘಡ: ಅಪಘಾತದಲ್ಲಿ 4 ಮಕ್ಕಳು ಸೇರಿದಂತೆ 11 ಮಂದಿ ದಾರುಣ ಸಾವಾಗಿದೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೂವರು ಗಾಯಾಳುಗಳನ್ನು ರಾಯ್‌ಪುರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಬುಧವಾರ ಬೆಳಗ್ಗೆ ಅಪಘಾತ, ನಾಲ್ವರು ಸಾವು: ಬುಧವಾರ ಮುಂಜಾನೆ ಖಪರ್ವಾಡ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 4 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಒಂದೇ ಕುಟುಂಬದ ಮೂವರು ಭಾಗಿಯಾಗಿದ್ದರು. ಕುಟುಂಬವು ಬಲೋಡಾ ಜಿಲ್ಲೆಯ ನಿವಾಸಿಗಳಾಗಿದ್ದು, ಕೆಲಸದ ನಿಮಿತ್ತ ರಾಯಪುರಕ್ಕೆ ತೆರಳಿದ್ದರು. ಆದರೆ, ಅವರ ಕಾರು ರಿಪೇರಿ ಹಿನ್ನೆಲೆ ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್‌ನಲ್ಲಿ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಇದನ್ನು ಓದಿ:ಧಾರವಾಡದಲ್ಲಿ ಭೀಕರ ಅಪಘಾತ: ಐವರು ಸ್ಥಳದಲ್ಲೇ ಸಾವು