ಅಯೋಧ್ಯೆ(ಯುಪಿ): ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ಭಕ್ತರು ಉದಾರವಾಗಿ ದೇಣಿಗೆ ನೀಡುತ್ತಿದ್ದು, ಇದೀಗ ಟ್ರಸ್ಟ್‌ಗೆ ಬಂದ 22 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 15,000 ಚೆಕ್‌ಗಳು ಬೌನ್ಸ್ ಆಗಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ತನ್ನ ಜಿಲ್ಲಾ ಘಟಕಗಳ ಪರವಾಗಿ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇದುವರೆಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದೇಣಿಗೆಯಾಗಿ 3,400 ಕೋಟಿ ರೂ. ಬಂದಿದೆ.
ಬೌನ್ಸ್ ಆದ ಚೆಕ್‌ಗಳ ಬಗ್ಗೆಯೂ ವರದಿಯಲ್ಲಿ ಮಾಹಿತಿ ನೀಡಲಾಗಿದೆ, ಆದರೆ, ಗೌರವದ ದೃಷ್ಟಿಯಿಂದ ಅವುಗಳ ಬಗ್ಗೆ ವಿವರವಾಗಿ ತಿಳಿಸಿಲ್ಲ. ಅಂತಹ ಚೆಕ್‌ಗಳನ್ನು ಪ್ರತ್ಯೇಕಿಸಿ ಎರಡನೇ ವರದಿಯನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಇದರಿಂದಾಗಿ ವಿವಿಧ ಕಾರಣಗಳಿಂದ ಬೌನ್ಸ್ ಆಗಿರುವ ಚೆಕ್‌ಗಳ ಬಗ್ಗೆ ನಿಖರವಾದ ಮಾಹಿತಿ ತಿಳಿಯಲಿದೆ ಎಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಚೇರಿ ವ್ಯವಸ್ಥಾಪಕ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.
ಅಕ್ಷರ ತಪ್ಪುಗಳು ಅಥವಾ ಸಿಗ್ನೇಚರ್ ಹೊಂದಾಣಿಕೆಯಾಗದೇ ಅಥವಾ ಇತರ ಯಾವುದೇ ತಾಂತ್ರಿಕ ಕಾರಣಗಳಿಂದಾಗಿ ಅನೇಕ ಚೆಕ್‌ಗಳು ಬೌನ್ಸ್ ಆಗಿರಬಹುದು. ಸಣ್ಣಪುಟ್ಟ ತಾಂತ್ರಿಕ ಕಾರಣಗಳಿಂದ ಬೌನ್ಸ್ ಆಗಿರುವ ಚೆಕ್‌ಗಳನ್ನು ಮತ್ತೊಮ್ಮೆ ಬ್ಯಾಂಕ್‌ಗೆ ಸಲ್ಲಿಸಲಾಗುವುದು. ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದೇ ಇರುವುದು ಚೆಕ್ ಬೌನ್ಸ್ ಆಗಲು ಪ್ರಮುಖ ಕಾರಣಗಳಲ್ಲಿ ಒಂದು ಎಂದರು.
ಬೌನ್ಸ್ ಆದ ಚೆಕ್ಗಳಲ್ಲಿ 2000ಕ್ಕೂ ಹೆಚ್ಚು ಚೆಕ್ ನೀಡಿದವರು ಅಯೋಧ್ಯೆ ಜಿಲ್ಲೆಯ ದಾನಿಗಳು. ಇದುವರೆಗೆ ರಾಮಮಂದಿರ ನಿರ್ಮಾಣಕ್ಕೆ 31,663 ಮಂದಿ 1 ಲಕ್ಷದಿಂದ 5 ಲಕ್ಷದವರೆಗೆ ದೇಣಿಗೆ ನೀಡಿದ್ದಾರೆ. 5 ಲಕ್ಷದಿಂದ 10 ಲಕ್ಷದವರೆಗೆ 1,428 ಮಂದಿ, ಒಟ್ಟು 123 ಮಂದಿ 25 ಲಕ್ಷದಿಂದ 50 ಲಕ್ಷ ರೂ., 127 ಮಂದಿ 50 ಲಕ್ಷದಿಂದ 1 ಕೋಟಿ ರೂ.ವರೆಗೆ ದೇಣಿಗೆ ನೀಡಿದ್ದಾರೆ. 1 ಕೋಟಿಗಿಂತ ಹೆಚ್ಚು ದೇಣಿಗೆ ನೀಡಿದವರ ಸಂಖ್ಯೆ 74 ಆಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 'ನೌಟಂಕಿ' ಕಂಪನಿಗೆ 'ತಮಾಶಾ' ಗ್ಯಾರಂಟಿ: ₹141 ಕೋಟಿ ಸಾಲ ಕೊಟ್ಟು ಬ್ಯಾಂಕುಗಳಿಗೆ ಫಜೀತಿ!