ಚೆನ್ನೈ, ತಮಿಳುನಾಡು: ಸೈಬರ್ ಅಪರಾಧಗಳಿಗೆ ಹೆಸರುವಾಸಿಯಾಗಿರುವ ಉತ್ತರ ಭಾರತದ ರಾಜ್ಯಗಳ ಹಲವು ಗ್ಯಾಂಗ್‌ಗಳು ದೇಶಾದ್ಯಂತ ನಾನಾ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ವಂಚನೆ ನಡೆಸಿ ಸಾರ್ವಜನಿಕರಿಂದ ನಿರಂತರವಾಗಿ ಹಣ ದೋಚುತ್ತಿದ್ದಾರೆ. ಅಷ್ಟೇ ಅಲ್ಲ ಚೆನ್ನೈ ಮೂಲದ ಚಿನ್ನದ ವ್ಯಾಪಾರಿಯೊಬ್ಬರಿಗೆ ಕೋಟಿಗಟ್ಟಲೆ ವಂಚಿಸಿದ ಪ್ರಕರಣದಲ್ಲಿ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ ಸೈಬರ್ ಕ್ರೈಂ ಪೊಲೀಸರು ಉತ್ತರ ರಾಜ್ಯದ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಡೇಟಿಂಗ್ ಆ್ಯಪ್ ಮೂಲಕ ವಂಚನೆ: ತಮಗೆ ಆದ ವಂಚನೆ ಬಗ್ಗೆ ಚೆನ್ನೈನ ಪಾರ್ಕ್ ಟೌನ್ ನ ಚಿನ್ನದ ವ್ಯಾಪಾರಿಯೊಬ್ಬರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು. ಡೇಟಿಂಗ್ ಆ್ಯಪ್ ಮೂಲಕ ಹಲವು ಮಹಿಳೆಯರನ್ನು ಭೇಟಿಯಾಗಿದ್ದೇನೆ. ಅದರ ಆಧಾರದ ಮೇಲೆ ಮೈಮಿಲಾಪ್ ಮತ್ತು ಸೋಲ್‌ಮೇಟ್ ಎಂಬ ಆ್ಯಪ್‌ಗಳ ಮೂಲಕ ರೂಪಾ ಎಂಬ ಮಹಿಳೆಯ ಪರಿಚಯವಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಪ್ರಕಾರ: ರೂಪಾ ಮತ್ತು ಚಿನ್ನದ ವ್ಯಾಪಾರಿ ಮಧ್ಯೆ ಪ್ರೀತಿ ಬೆಳೆದಿದೆ. ಇದರ ಮೂಲಕ ಉದ್ಯಮಿ ಬಳಿ ಕೈತುಂಬಾ ಹಣ ಇರುವುದು ರೂಪಾಗೆ ಗೊತ್ತಾಗಿದೆ. ಇದರ ನಂತರ, ರೂಪಾ ನಿಮ್ಮ ಹಣವನ್ನು ಹೆಚ್ಚಿಸಲು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಚಿನ್ನದ ವ್ಯಾಪಾರಿಗೆ ಹೇಳಿದ್ದಾಳೆ. ಆಕೆಯ ಆಕರ್ಷಕ ಮಾತು, ನಿರರ್ಗಳವಾದ ಇಂಗ್ಲಿಷ್ ಮತ್ತು ಹೂಡಿಕೆ ಜ್ಞಾನದಿಂದ ಚಿನ್ನದ ವ್ಯಾಪಾರಿ ಸ್ವಲ್ಪಮಟ್ಟಿಗೆ ಹಣ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ.
ಉದ್ಯಮಿಗೆ ವಂಚನೆ: ಹೀಗೆ ಹೂಡುವ ಹಣದ ಮೂಲಕ ಕ್ರಿಪ್ಟೋ ಕರೆನ್ಸಿಯಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಿ ಶೇ.300ರಷ್ಟು ಬಡ್ಡಿ ವಾಪಸ್ ಪಡೆಯಬಹುದು ಎಂಬ ನಂಬಿಕೆ ಮೂಡಿಸಿದ್ದಾರೆ ರೂಪಾ. ಇದನ್ನೇ ನಂಬಿ ಆರಂಭಿಕ ಹಂತದಲ್ಲಿ 400 ರೂಪಾಯಿ ಹೂಡಿಕೆ ಆರಂಭಿಸಿದ ಚಿನ್ನದ ವ್ಯಾಪಾರಿ ಕ್ರಮೇಣ 1,077 ಬಾರಿ ಹೂಡಿಕೆ ಮಾಡಿದ್ದಾರೆ. ಮೊದಲ ಕಂತು 400 ರೂಪಾಯಿಯಿಂದ ಆರಂಭಿಸಿದ ಚಿನ್ನದ ವ್ಯಾಪಾರಿ ಕ್ರಮೇಣ 10 ಲಕ್ಷ ರೂಪಾಯಿವರೆಗೂ ಹೂಡಿಕೆ ಮಾಡಿದ್ದಾರೆ.
ಹೀಗೆ ಕಟ್ಟಿದ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಶೇ.300ರಷ್ಟು ಬಡ್ಡಿ ವಾಪಸ್ ಪಡೆಯುವುದಾಗಿ ರೂಪಾ ಹೇಳಿ ಮೋಸ ಹೋಗಿದ್ದ. ಕ್ರಮೇಣವಾಗಿ ಚಿನ್ನದ ವ್ಯಾಪಾರಿ ರೂಪಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅನುಮಾನ ಬಂದಾಗಲೆಲ್ಲಾ ಚಿನ್ನದ ವ್ಯಾಪಾರಿ ಬ್ಯಾಂಕ್ ಖಾತೆಗೆ ಒಂದಿಷ್ಟು ಲಕ್ಷ ಹಣವನ್ನು ಜಮಾ ಮಾಡಿಸುತ್ತಿದ್ದಳು ರೂಪಾ. ಈ ಮೂಲಕ ರೂಪಾ ಉದ್ಯಮಿಯ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದಳು. ಆಕೆಯ ಮಾತಿಗೆ ಮಾರು ಹೋದ ಉದ್ಯಮಿ ಬರೋಬ್ಬರಿ ಮೂರು ಕೋಟಿ 61 ಲಕ್ಷ ರೂಪಾಯಿ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ.
ಹಠಾತ್ತಾಗಿ ರೂಪಾ ಶಾ ಚಿನ್ನದ ವ್ಯಾಪಾರಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಆಗ ಚಿನ್ನದ ವ್ಯಾಪಾರಿಯ ಅನುಮಾನಗಳು ಬಲಗೊಂಡಿವೆ. ಬಳಿಕ ವಂಚನೆಗೆ ಬಲಿಯಾಗಿರುವುದನ್ನು ಅರಿತುಕೊಂಡು ಕೂಡಲೇ ಚೆನ್ನೈ ಪೊಲೀಸ್ ಕಮಿಷನರ್ ಕಚೇರಿಗೆ ಮಾಹಿತಿ ಮುಟ್ಟಿಸಿದ್ದರು.
ಸೈಬರ್ ಕ್ರೈಂ ಪೊಲೀಸರಿಂದ ಕ್ರಮ: ದೂರಿನ ಆಧಾರದ ಮೇಲೆ ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ನ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಚಿನ್ನದ ವ್ಯಾಪಾರಿ ಬಳಸಿದ ಡೇಟಿಂಗ್ ಆ್ಯಪ್‌ಗಳನ್ನು ಪರಿಶೀಲಿಸಿದ ನಂತರ, ಅವರು ವಂಚಿಸಿದ ತಾಂತ್ರಿಕ ಸ್ಥಳವನ್ನು ಪತ್ತೆಹಚ್ಚಲು ಪ್ರಾರಂಭಿಸಿದರು.
ಸೈಬರ್ ಕ್ರೈಂ ಪೊಲೀಸರು ಮಹಿಳೆ ಕಂಪ್ಯೂಟರ್, ಸೆಲ್ ಫೋನ್, ಐಪಿ ವಿಳಾಸ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದ ನೆಟ್‌ವರ್ಕ್‌ಗಳನ್ನು ಪತ್ತೆಹಚ್ಚಿದ್ದಾರೆ. ಸೈಬರ್ ಕ್ರೈಮ್ ತನಿಖಾಧಿಕಾರಿ ವಿನೋದ್ ನೇತೃತ್ವದ ವಿಶೇಷ ಪೊಲೀಸ್ ಪಡೆ ಹತ್ತು ದಿನಗಳ ನಿರಂತರ ಅನ್ವೇಷಣೆಯ ಪರಿಣಾಮವಾಗಿ ರೂಪಾ ಶಾ ಮತ್ತು ಆಕೆಯ ಸಹವರ್ತಿಗಳಾದ ವಿಜಯ್ ಸೋನಿ ಮತ್ತು ರಮೇಶ್ ಸೋನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ರೂಪಾ ಹೇಳಿದ್ದು ಹೀಗೆ: ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ರೂಪಾ, ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದಾಗ ಬ್ಯಾಂಕ್ ಸಾಲ, ವಿಮೆ ಹಣ ಕೊಡಿಸಲು ಹಲವರ ಜತೆ ಸೆಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಹಣ ಇದ್ದವರು ತಕ್ಷಣ ನಂಬಿ ಪ್ರಶ್ನೆ ಮಾಡದೇ ಹಣ ಪಾವತಿಸಿದ್ದನ್ನು ಕಂಡಿದ್ದೇನೆ. ಹೀಗಾಗಿ ನಾನು ಕಾಲ್ ಸೆಂಟರ್ ಆರಂಭಿಸಿ ಹಣ ವಂಚಿಸುತ್ತಿದ್ದೆ ಎಂದು ರೂಪಾ ಶಾ ಹೇಳಿ ಕೊಂಡಿದ್ದಾಳೆ.
ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯರ ಮಾತಿಗೆ ಪುರುಷರು ಮಾರು ಹೋಗುತ್ತಾರೆ. ಪುರುಷರು ಏನನ್ನೂ ಕೇಳದೇ ಹೂಡಿಕೆ ಮಾಡುತ್ತಾರೆ. ಪುರುಷರಿಗೆ ಅದರಲ್ಲೂ ಉದ್ಯಮಿಗಳಿಗೆ ತಾವು ಮಾತನಾಡುವ ಸಮಯಕ್ಕೆ ಹೆಚ್ಚು ಸಂಬಳ ಕೊಡುತ್ತಾರೆ. ಈ ಆಧಾರದಲ್ಲಿ ಹಲವು ಮಹಿಳೆಯರಿಗೆ ರೂಪಾ ಕಾಲ್ ಸೆಂಟರ್ಗಳಲ್ಲಿ ತರಬೇತಿ ನೀಡಿ ಉದ್ಯೋಗ ನೀಡುತ್ತಿರುವುದು ಕೂಡ ತನಿಖೆ ಮೂಲಕ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲ ರೂಪಾ ಶಾ ಭಾರತದಾದ್ಯಂತ ತನ್ನ ಗ್ಯಾಂಗ್ ಮೂಲಕ ಮೂವತ್ತು ಕೋಟಿ ರೂಪಾಯಿಗಳಿಗೂ ಹೆಚ್ಚು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಮೂವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಓದಿ: Pickpockets arrested: ಜೇಬುಗಳ್ಳತನವೇ ಇವರ ಕಸುಬು! ಒಂದೇ ಕುಟುಂಬದ ಸದಸ್ಯರೂ ಸೇರಿ ಐವರ ಬಂಧನ