ದರ್ಭಾಂಗಾ (ಬಿಹಾರ) : ಇಲ್ಲಿನ ವ್ಯಕ್ತಿಯೊಬ್ಬ ಸಲ್ಲಿಸಿದ ಆರ್ಟಿಐ ಅರ್ಜಿ ಚರ್ಚೆಗೀಡು ಮಾಡಿದೆ. ಈತ ಕೇಳಿರುವ ಪ್ರಶ್ನೆಯು ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳ ತಲೆ ಕೆಡಿಸಿದೆ. ಈತನ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬುದು ಕೂಡ ಪ್ರಶ್ನಾರ್ಹವಾಗಿದೆ. ಅಷ್ಟಕ್ಕೂ ವ್ಯಕ್ತಿ ಕೇಳಿದ ಪ್ರಶ್ನೆ ಏನಪ್ಪಾ ಅಂತೀರಾ. ಇಲ್ಲಿದೆ ಓದಿ..
ಆರ್ಟಿಐ ಪ್ರಶ್ನೆಯಿದು: ಮಳೆಗಾಲದಲ್ಲಿ ಸೂಕ್ತ ಮಳೆ ಬಾರದೇ ನಮ್ಮ ಭಾಗದ ಜನರು ಬಸವಳಿದಿದ್ದಾರೆ. ಈ ಭಾಗದಲ್ಲಿ ಮಾತ್ರ ಮಳೆ ಏಕೆ ಆಗುತ್ತಿಲ್ಲ. ಇತ್ತೀಚೆಗೆ ಇಸ್ರೋ ವಿಜ್ಞಾನಿಗಳು ಚಂದ್ರನಲ್ಲಿಗೆ ಕಳುಹಿಸಿದ ಉಪಗ್ರಹ ಇದಕ್ಕೆ ಕಾರಣವಾ? ಚಂದ್ರಯಾನ ಉಪಗ್ರಹದಿಂದ ಮಳೆ ಬೀಳುತ್ತಿಲ್ಲವೇ?. ಜೊತೆಗೆ ಚಂದ್ರನ ಮೇಲೆ ನಿಜಕ್ಕೂ ಉಪಗ್ರಹ ಇಳಿದಿದೆಯೇ ಎಂದು ಆರ್ಟಿಐ ಕಾರ್ಯಕರ್ತ ಪ್ರಶ್ನೆ ಮಾಡಿದ್ದಾನೆ.
ಈ ಆರ್ಟಿಐ ಅರ್ಜಿ ನೋಡಿದ್ದೇ ತಡ.. ಅಧಿಕಾರಿಗಳಿಗೇ ಹೇಗೆ ಉತ್ತರಿಸಬೇಕು ಎಂಬುದೇ ಅರ್ಥವಾಗುತ್ತಿಲ್ಲವಂತೆ. ಚಂದ್ರಯಾನಕ್ಕೂ ಮಳೆಗೂ ಎತ್ತಣ ಸಂಬಂಧ. ಉಪಗ್ರಹ ಉಡಾವಣೆಯಿಂದ ಮಳೆಯನ್ನು ಹೇಗೆ ತಡೆಯಲು ಸಾಧ್ಯ ಎಂಬುದು ಅಧಿಕಾರಿಗಳ ತಲೆಯಲ್ಲಿ ಓಡುತ್ತಿರುವ ಪ್ರಶ್ನೆಯಾಗಿದೆ.
ದೇವರಿಂದಲೇ ಉತ್ತರ ಪಡೆಯಿರಿ: ದರ್ಭಾಂಗ್ ಜಿಲ್ಲೆಯ ಮಹುವರ್ ಗ್ರಾಮದ ನಿವಾಸಿಯಾದ ಆರ್ಟಿಐ ಕಾರ್ಯಕರ್ತ ರಾಜ್‌ಕುಮಾರ್ ಝಾ ಎಂಬಾತ, ಉಪಗ್ರಹ ಸೇರಿದಂತೆ ಹಲವೆಡೆ ಅತ್ಯಾಧುನಿಕ ಉಪಕರಣಗಳನ್ನು ಬಳಸುವ ಸರ್ಕಾರ, ಸರಿಯಾದ ಸಮಯಕ್ಕೆ ಮಳೆಯನ್ನು ಏಕೆ ತರಿಸಲು ಸಾಧ್ಯವಾಗುತ್ತಿಲ್ಲ ಎಂದು ದೇವರಿಂದಲೇ ಸಲಹೆ ಪಡೆಯಬೇಕು. ಪ್ರಕೃತಿಯು ಮುಜುಗರಕ್ಕೊಳಗಾಗಿದೆಯೇ? ಇತ್ತೀಚೆಗಷ್ಟೇ ಕೈಗೊಂಡ ಚಂದ್ರಯಾನದ ಉಪಗ್ರಹ ಚಂದ್ರನ ಮೇಲೆ ಇಳಿದಿದೆಯೇ? ಎಂದು ಕೇಳಿದ್ದಾನೆ.
ಈ ಬಗ್ಗೆ ಮಾತನಾಡಿರುವ ರಾಜ್‌ಕುಮಾರ್, ಹವಾಮಾನದ ಹಠಾತ್ ಬದಲಾವಣೆಯಿಂದ ಜನರು ಅಸಮಾಧಾನಗೊಂಡಿದ್ದಾರೆ. ನನಗೆ ಅನುಮಾನವಿದೆ. ಚಂದ್ರಯಾನ-3 ಮಿಷನ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದ್ದುದೇ ಪ್ರಕೃತಿ ಮುನಿಸಿಕೊಳ್ಳಲು ಕಾರಣವಾಯಿತೇ?. ಹವಾಮಾನ ಬದಲಾವಣೆ ಏಕೆ ಸಂಭವಿಸುತ್ತಿದೆ. ಇದನ್ನು ದೇವರಿಂದಲೇ ಕೇಳಿ ಉತ್ತರಿಸಲಿ ಎಂದು ಆತ ಹೇಳಿದ್ದಾನೆ.
ದೇವರಿಂದ ಸಲಹೆ ಪಡೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಆತ, ಚಂದ್ರಯಾನ-3 ಯೋಜನೆಯಲ್ಲಿ ಕಳುಹಿಸಲಾದ ಪ್ರಗ್ಯಾನ್ ರೋವರ್‌ನಲ್ಲಿರುವ ಉಪಕರಣಗಳು ದೇವರನ್ನು ಸಂಪರ್ಕಿಸಿ ಅದರ ಸಿಗ್ನಲ್‌ಗಳನ್ನು ನಮಗೆ ಲಭ್ಯವಾಗುವಂತೆ ಮಾಡಲಿ. ಇಸ್ರೋ ವಿಜ್ಞಾನಿಗಳು ದೇವರನ್ನು ಉಪಗ್ರಹದ ಮೂಲಕ ಸಂಪರ್ಕಿಸಲಿ ಎಂದು ಹೇಳಿದ್ದಾನೆ. ಈತನ ಈ ವಿಚಿತ್ರ ಬೇಡಿಕೆಯು ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಬೆಳಗ್ಗೆ 9 ಗಂಟೆಯೊಳಗೆ ಮತದಾನ ಮಾಡಿದ್ರೆ ಅವಲಕ್ಕಿ, ಜಿಲೇಬಿ ಉಚಿತ.. ಇಂದೋರ್ ವರ್ತಕರ ಸಂಘದಿಂದ ಘೋಷಣೆ