ದಾಂತೇವಾಡ (ಛತ್ತೀಸ್ಗಢ): ನಕ್ಸಲ್ ಪೀಡಿತ ದಾಂತೇವಾಡ ಜಿಲ್ಲೆಯಲ್ಲಿ 11 ಮಂದಿ ನಕ್ಸಲರು ಶರಣಾಗಿದ್ದು, ಅವರೆಲ್ಲರ ತಲೆಗೆ ಸರ್ಕಾರ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಾವೋವಾದಿ ಸಿದ್ಧಾಂತದ ಬಗ್ಗೆ ನಿರಾಸೆ ವ್ಯಕ್ತಪಡಿಸಿ, ಕಟೆಕಲ್ಯಾನ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಕ್ಸಲರು ಟೇಟಂ ಪೊಲೀಸ್ ಕ್ಯಾಂಪ್ನ ಸಿಆರ್ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.
ಜಿಲ್ಲಾ ಪೊಲೀಸರು ನಡೆಸುತ್ತಿರುವ ಲೋನ್ ವರ್ರತು (ನಿಮ್ಮ ಮನೆ ಅಥವಾ ಗ್ರಾಮಕ್ಕೆ ಹಿಂತಿರುಗಿ) ಅಭಿಯಾನದ ಭಾಗವಾಗಿ ನಕ್ಸಲರು ಹಿಂಸಾಚಾರವನ್ನು ತೊರೆದು, ಶರಣಾಗುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅಭಿಷೇಕ್ ಪಲ್ಲವ ಸ್ಪಷ್ಟ ಪಡಿಸಿದ್ದಾರೆ.
ಶರಣಾಗತಿಯಾದ 11 ಕಾರ್ಯಕರ್ತರಲ್ಲಿ, ಕುಮ್ಮಾ ಮಾಂಡವಿ ಎಂಬ ನಕ್ಸಲ್ ಕಮಾಂಡರ್ ಆಗಿ ಸಕ್ರಿಯರಾಗಿದ್ದು, ವಿವಿಧ ಗುಂಪುಗಳು ಮತ್ತು ಗ್ರಾಮ ಮಟ್ಟದ ಸಮಿತಿಗಳಲ್ಲಿ ಪ್ರಭಾವ ಹೊಂದಿದ್ದಾರೆ. ಶರಣಾದ ನಕ್ಸಲರಿಗೆ ತಕ್ಷಣಕ್ಕೆ ತಲಾ 10 ಸಾವಿರ ರೂಪಾಯಿಗಳ ನೆರವು ನೀಡಲಾಗಿದ್ದು, ಕೆಲವು ದಿನಗಳಲ್ಲಿ ಸರ್ಕಾರದ ನೀತಿಯ ಪ್ರಕಾರ ಸೌಲಭ್ಯಗಳನ್ನು ಒದಗಿಸಲಾಗುವುದು.
ಜೂನ್ನಿಂದ 'ನಿಮ್ಮ ಮನೆ ಅಥವಾ ಗ್ರಾಮಕ್ಕೆ ಹಿಂತಿರುಗಿ' ಅಭಿಯಾನ ಆರಂಭವಾಗಿದ್ದು, ಈವರೆಗೆ ಸುಮಾರು 199 ನಕ್ಸಲರು ದಾಂತೇವಾಡ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.