ನವದೆಹಲಿ: ಪೆಗಾಸಸ್ ಹ್ಯಾಕಿಂಗ್ ವಿರುದ್ಧದ ಊಹಾಪೋಹ, ಸಂಶಯ ಮತ್ತು ಆಧಾರರಹಿತ ಮಾಧ್ಯಮ ವರದಿಗಳನ್ನು ಆಧರಿಸಿ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಸರ್ಕಾರ ಎರಡು ಪುಟಗಳ ಅಫಿಡವಿಟ್ ಸಲ್ಲಿಸಿದೆ. ಸಂಸತ್ತಿನಲ್ಲಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪೆಗಾಸಸ್ ಆರೋಪಗಳ ಕುರಿತು ಸರ್ಕಾರದ ನಿಲುವು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಹೇಳಿದೆ.
ಪೆಗಾಸಸ್ ಸಮಸ್ಯೆಯ ಎಲ್ಲ ಅಂಶಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ಸ್ಥಾಪಿಸಲು ಕೇಂದ್ರವು ಚಿಂತನೆ ನಡೆಸುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದೆ. ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಸ್ಪೈವೇರ್ ಅನ್ನು ಬಳಸಲಾಗಿದೆ ಎಂಬ ಆರೋಪಗಳನ್ನು ಪೆಗಾಸಸ್ ನಿರಾಕರಿಸಿದೆ. ಇವು ಕೇವಲ ಊಹಾಪೋಹಗಳು ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯಗಳಲ್ಲಿ ಹುದ್ದೆ ಭರ್ತಿಯಾಗದಿದ್ದಕ್ಕೆ ಅಸಮಾಧಾನ
ನ್ಯಾಯಾಲಯಗಳಲ್ಲಿ ನೇಮಕಾತಿ ವಿಳಂಬ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಕಳೆದೊಂದು ವರ್ಷದಿಂದ ಹೇಳಿದ್ದನ್ನೇ ಹೇಳುತ್ತಿದೆ. ಕೋರ್ಟ್ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.10 ದಿನಗಳಲ್ಲಿ ನ್ಯಾಯಮಂಡಳಿಗಳಲ್ಲಿ ನೇಮಕಾತಿಗಳನ್ನು ಮಾಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಆದೇಶಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದ ಕೇಂದ್ರವು ಅದನ್ನು ಏಕೆ ಜಾರಿಗೊಳಿಸಿಲ್ಲ ಎಂದು ಕೇಳಿತು ಕೋರ್ಟ್ ಪ್ರಶ್ನಿಸಿತು. ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಧಿಕರಣಗಳನ್ನು ಸ್ಥಾಪಿಸಲು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು 2 ವಾರಗಳ ಗಡುವು ನೀಡುವಂತೆ ಕೇಳಿದರು. ಇದಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಆಗಷ್ಟ್ 31ಕ್ಕೆ ಮುಂದೂಡಿಕೆ
ಇದು ಕೊನೆಯ ಅವಕಾಶ ಮತ್ತೆ ಸಮಯ ನೀಡಲು ಸಾಧ್ಯವಿಲ್ಲ. 10 ದಿನಗಳಲ್ಲಿ ನೇಮಕಾತಿಗಳನ್ನು ಮಾಡಿ. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಮುಂದಿನ ವಿಚಾರಣೆಯನ್ನು ಆ. 31ಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ: ವಿವಾಹ ನೋಂದಣಿಗೆ ಒಟ್ಟಿಗೆ ಆಗಮಿಸಲು ಸಾಧ್ಯವಾಗದ ದಂಪತಿಗೆ ಗುಡ್ನ್ಯೂಸ್ ಕೊಟ್ಟ ಸುಪ್ರೀಂಕೋರ್ಟ್
ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್, ನ್ಯಾಯಮಂಡಳಿ ಸುಧಾರಣಾ ಮಸೂದೆ-2021 ಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಸುಗ್ರೀವಾಜ್ಞೆ ಅಮಾನತುಗೊಳಿಸಿದ ನಂತರ ಸಂಸತ್ತಿನಲ್ಲಿ ಏಕೆ ಮಂಡಿಸಬೇಕು ಎಂದು ನ್ಯಾಯಾಲಯ ಪ್ರಶ್ನಿಸಿತು. ಮೂಲ ನ್ಯಾಯಾಧಿಕರಣಗಳನ್ನು ಮುಂದುವರಿಸಬೇಕೇ ಅಥವಾ ಮುಚ್ಚಬೇಕೇ ಎಂಬುದನ್ನು ಸ್ಪಷ್ಟಪಡಿಸಲು ಕೇಂದ್ರವನ್ನು ಕೇಳಲಾಗಿದೆ. ನ್ಯಾಯಮಂಡಳಿ ಸುಧಾರಣಾ ಮಸೂದೆಯನ್ನು ಆಗಸ್ಟ್ 3 ರಂದು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಆಗಸ್ಟ್ 9 ರಂದು ಅಂಗೀಕರಿಸಲಾಗಿತ್ತು.