ನವದೆಹಲಿ: ಮದ್ಯ, ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು ಮತ್ತು ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳು ಅಥವಾ ವಿಷಯವನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಎಫ್‌ಎಂ ರೇಡಿಯೊ ಚಾನೆಲ್‌ಗಳಿಗೆ ತಿಳಿಸಿದೆ. ಈ ಕುರಿತು ಎಫ್‌ಎಂ ರೇಡಿಯೋ ಚಾನೆಲ್‌ಗಳಿಗೆ ನೀಡಿದ ಸಲಹೆಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅನುಮತಿ ಒಪ್ಪಂದ (GOPA)ದಲ್ಲಿ ಸೂಚಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ.
ಇತ್ತೀಚೆಗೆ ಕೆಲವು ಎಫ್‌ಎಂ ಚಾನೆಲ್‌ಗಳು ಮದ್ಯ, ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಅಥವಾ ವಿಷಯವನ್ನು ಪ್ರಸಾರ ಮಾಡುತ್ತಿದ್ದು ಸಚಿವಾಲಯ ಈ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಇಂತಹ ವಿಷಯಗಳು ಮಕ್ಕಳ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಬಂದೂಕು ಸಂಸ್ಕೃತಿ ಹುಟ್ಟುಹಾಕುತ್ತಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಪ್ರಸ್ತಾಪಿಸಿದೆ. ಇಂಥ ಕಾರ್ಯಕ್ರಮಗಳ ಪ್ರಸಾರವು ಆಲ್ ಇಂಡಿಯಾ ರೇಡಿಯೊ(AIR) ಪ್ರೋಗ್ರಾಂ ಕೋಡ್ ಉಲ್ಲಂಘಿಸುತ್ತದೆ ಎಂದಿದ್ದು, ಪ್ರಸಾರ ನಿಷೇಧಿಸಲು ನಿರ್ಬಂಧ ವಿಧಿಸುವ ಹಕ್ಕು ಕೇಂದ್ರಕ್ಕಿದೆ ಎಂದು ಎಚ್ಚರಿಕೆ ಕೊಟ್ಟಿದೆ.
ಇದನ್ನೂ ಓದಿ: ಜಾಲತಾಣಗಳಲ್ಲಿ ಆಯುಧದೊಂದಿಗೆ ಫೋಟೋ ಹಾಕುವಂತಿಲ್ಲ: ಬಂದೂಕು ಸಂಸ್ಕೃತಿಗೆ ಕಡಿವಾಣ