ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಕೇಂದ್ರ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. ಈ ಬಗ್ಗೆ ಸಿಬಿಐ ಇಲ್ಲಿನ ರೋಸ್ ಅವೆನ್ಯೂ ಕೋರ್ಟ್ಗೆ ಮಾಹಿತಿ ನೀಡಿದೆ.
ಉದ್ಯೋಗಕ್ಕಾಗಿ ಭೂಮಿ ಹಗರಣ ಕೇಸ್ ವಿಚಾರಣೆಯ ವೇಳೆ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ, ಕೇಸ್ ದಾಖಲಿಸಲು ಅನುಮತಿಸಲಾಗಿದೆ. ಒಂದು ವಾರದೊಳಗೆ ಪ್ರಕರಣದ ಇತರ ಆರೋಪಿಗಳ ವಿರುದ್ಧವೂ ವಿಚಾರಣೆ ನಡೆಸಲು ಅನುಮತಿ ಪಡೆಯುವುದಾಗಿ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.
ಹೊಸ ಚಾರ್ಜ್ ಶೀಟ್ ಸಲ್ಲಿಕೆ: ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಮತ್ತು ಇತರ ಆರೋಪಿಗಳ ವಿರುದ್ಧ ಸಲ್ಲಿಸಲಾದ ಹೊಸ ಚಾರ್ಜ್ ಶೀಟ್ ಆಧಾರದ ಮೇಲೆ ಪ್ರಕರಣ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ. ಚಾರ್ಜ್ಶೀಟ್ನಲ್ಲಿ ಹೆಸರಿರುವ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ನ್ಯಾಯಾಲಯವು ವಿಚಾರಣೆ ನಡೆಸಲಿದೆ. ಸಿಬಿಐ ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ಪ್ರಕರಣವನ್ನು ಸೆಪ್ಟೆಂಬರ್ 21 ರಂದು ವಿಚಾರಣೆ ನಡೆಸಲಿದ್ದಾರೆ.
ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಜುಲೈ 3 ರಂದು ಸಿಬಿಐ ಹೊಸ ಆರೋಪಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಇದರಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ರಾಬ್ಡಿ ದೇವಿ ಮತ್ತಿತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಪ್ರಕರಣದಲ್ಲಿ ಲಾಲು, ರಾಬ್ಡಿ ಮತ್ತು ಮಿಸಾ ಭಾರ್ತಿ ಅವರು ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ಆಗಿನ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ ಯಾದವ್, ಪಶ್ಚಿಮ ಸೆಂಟ್ರಲ್ ರೈಲ್ವೆಯ ಮ್ಯಾನೇಜರ್ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಜುಲೈನಲ್ಲಿ ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಕೇಸ್ಗೆ ಸಂಬಂಧಿಸಿದಂತೆ ಎರಡನೇ ಚಾರ್ಜ್ಶೀಟ್ ಸಲ್ಲಿಸಲಾಯಿತು.
ಪ್ರಕರಣವೇನು?: 2004-2009ರ ಅವಧಿಯಲ್ಲಿ ಆಗಿನ ಕೇಂದ್ರ ರೈಲ್ವೇ ಸಚಿವರಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಅವಧಿಯಲ್ಲಿ ರೈಲ್ವೆ ಇಲಾಖೆಯ ವಿವಿಧ ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿಗಾಗಿ ಆಕಾಂಕ್ಷಿಗಳಿಂದ ಅವರ ಭೂಮಿಯನ್ನು ಸರ್ಕಾರಿ ದರಕ್ಕಿಂತಲೂ ಕಡಿಮೆಗೆ ವರ್ಗ ಮಾಡಿಕೊಂಡ ಆರೋಪವಿದೆ. ಇದರಲ್ಲಿ 600 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ದೂರು ಕೇಳಿಬಂದಿದೆ. ಹಗರಣದ ಹಣವನ್ನು ಸಚಿವರು, ಅವರ ಕುಟುಂಬ ವರ್ಗ ಮತ್ತಿತರರ ಖಾತೆಗೆ ಜಮಾ ಮಾಡಲಾಗಿದೆ.
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು ಪ್ರಸಾದ್, ಪತ್ನಿ ಮತ್ತು ಪುತ್ರಿಗೆ ಜಾಮೀನು ಮಂಜೂರು