ನವದೆಹಲಿ: ನಗರದ ಡಿಫೆನ್ಸ್ ಕಾಲೋನಿಯಲ್ಲಿ (HUDCO Place, Defense Colony) ಸಿಬಿಐ ಅಧಿಕಾರಿಯೊಬ್ಬರು ಗುರುವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟ ಜಿತೇಂದ್ರ ಕುಮಾರ್ (48) ಬೆಲ್ಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ನಲ್ಲಿ, "ನಾನು ಸಾಯುತ್ತಿದ್ದೇನೆ, ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಬರೆದಿದ್ದಾರೆ.
ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ನಿನ್ನೆ ಸಂಜೆ ಹೊತ್ತಿಗೆ ಕುಟುಂಬಸ್ಥರು ದೆಹಲಿಗೆ ಆಗಮಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿ, ಜಿತೇಂದ್ರ ಕುಮಾರ್ ದೆಹಲಿಯ ಹುಡ್ಕೋ ಪ್ಲೇಸ್‌ನಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸಿಬಿಐನಲ್ಲಿ ಉಪ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮತ್ತು ಮಕ್ಕಳು ಹಿಮಾಚಲ ಪ್ರದೇಶದ ಮಂಡಿಯಲ್ಲಿ ವಾಸಿಸುತ್ತಿದ್ದಾರೆ. ನಿನ್ನೆ ಬೆಳಗ್ಗೆ 7.45ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು.
ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ, ಬಾಲ್ಕನಿಯ ಪೈಪ್‌ನಲ್ಲಿ ನೇತಾಡುತ್ತಿದ್ದ ಜಿತೇಂದ್ರ ಕುಮಾರ್ ಅವರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಇಂದು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ. ದೆಹಲಿಗೆ ಆಗಮಿಸಿರುವ ಕುಟುಂಬಸ್ಥರಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಪುಲ್ವಾಮಾದಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನಿಗೆ ಗಾಯ