ನವದೆಹಲಿ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕಳೆದ ಎರಡು ವರ್ಷಗಳಿಂದ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದ ಆರೋಪದಲ್ಲಿ ಮೂವರನ್ನು ಸಿಬಿಐ ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಶುಕ್ರವಾರ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು, ಅಂತಾರಾಜ್ಯ ನಕಲಿ ಉದ್ಯೋಗ ದಂಧೆಯನ್ನು ಬಯಲಿಗೆಳೆದಿದೆ. ಬಿಹಾರದ ಪಾಟ್ನಾ, ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಜಾರ್ಖಂಡ್ನ ಧನ್ಬಾದ್ನ ಒಂಬತ್ತು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ.
"ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ. ಅವರಲ್ಲಿ ಬೆಂಗಳೂರಿನ ಅಜಯ್ ಕುಮಾರ್, ಜಾರ್ಖಂಡ್ ಮೂಲದ ಅಮನ್ ಕುಮಾರ್ ಅಲಿಯಾಸ್ ರೂಪೇಶ್ ಮತ್ತು ಬಿಹಾರ ಮೂಲಕ ಅಭಿಷೇಕ್ ಸಿಂಗ್ ಅಲಿಯಾಸ್ ವಿಶಾಲ್ ಬಂಧಿತರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಕಳೆದೆರಡು ವರ್ಷಗಳಿಂದ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಉದ್ಯೋಗ ಆಕಾಂಕ್ಷಿಗಳಿಂದ 10ರಿಂದ 20 ಲಕ್ಷದವರೆಗೆ ಆರೋಪಿಗಳು ವಸೂಲಿ ಮಾಡುತ್ತಿದ್ದರು. ಸಿಂಡಿಕೇಟ್ನ ಸದಸ್ಯರು ದೇಶದ ಅನೇಕ ನಗರಗಳಲ್ಲಿ ಆಕಾಂಕ್ಷಿಗಳಿಗೆ ನಕಲಿ ತರಬೇತಿಗಳನ್ನು ನೀಡಿದ್ದಾರೆ. ಇದರಲ್ಲಿ ಸುಮಾರು 25 ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರಗಳನ್ನು ನೀಡಿ ತರಬೇತಿ ನೀಡಲಾಗಿದೆ" ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನಕಲಿ ದಾಖಲೆ ಪಡೆದು ಭಾರತದ ನಿವಾಸಿಗಳಲ್ಲದವರಿಗೆ ಪಾಸ್‌ಪೋರ್ಟ್ ವಿತರಣೆ.. ಸೇವಾ ಕೇಂದ್ರದ ಹಿರಿಯ ಅಧಿಕಾರಿ ಸೇರಿ ಇಬ್ಬರ ಬಂಧನ
"ಸಕಿನಾಕಾ ತರಬೇತಿ ಕೇಂದ್ರದಲ್ಲಿ ಶೋಧ ನಡೆಸಿದಾಗ, ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಕರ್ನಾಟಕದವರು ಮತ್ತು ಕೆಲವರು ಮಹಾರಾಷ್ಟ್ರದವರು ಎಂದು ತಿಳಿದು ಬಂದಿದೆ. ನಕಲಿ ಕರೆ ಪತ್ರಗಳು, ನಕಲಿ ನೇಮಕಾತಿ ಪತ್ರಗಳು ಮತ್ತು ನಕಲಿ ತರಬೇತಿ ದಾಖಲೆಗಳಂತಹ ದೋಷಾರೋಪಣೆ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. "ತನ್ನ ನೈಜತೆಯನ್ನು ಸಾಬೀತುಪಡಿಸಲು, ಸಿಂಡಿಕೇಟ್ ವಿವಿಧ ರಾಜ್ಯಗಳಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ಅವಧಿಗಳನ್ನು ನಡೆಸುತ್ತಿದೆ" ಎಂದು ಸಂಸ್ಥೆ ಆರೋಪಿಸಿದೆ.
"ಮಂಗಳೂರಿನಲ್ಲಿ ಪ್ರಮುಖ ಇಬ್ಬರು ಕಿಂಗ್‌ಪಿನ್ (ಆರೋಪಿಗಳು) ಉದ್ಯೋಗಾಕಾಂಕ್ಷಿಗಳಿಗಾಗಿ ಹೊಸ ನಕಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿರುವುದು ಕಂಡುಬಂದಿದೆ. ಸದ್ಯ ಮೂವರನ್ನು ಬಂಧಿಸಲಾಗಿದೆ. ನಾಗ್ಪುರ (ಮಹಾರಾಷ್ಟ್ರ), ಧನ್ಬಾದ್ (ಜಾರ್ಖಂಡ್), ಪಾಟ್ನಾ ಮತ್ತು ಬಕ್ಸರ್ (ಬಿಹಾರ), ಮತ್ತು ಬೆಂಗಳೂರು (ಕರ್ನಾಟಕ) ಕಡೆಗಳಲ್ಲಿ ಆರೋಪಿಗಳು ಉದ್ಯೋಗಾಕಾಂಕ್ಷಿಗಳಿಗೆ ನಕಲಿ ತರಬೇತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಉದ್ಯೋಗ ಆಕಾಂಕ್ಷಿಗಳನ್ನು ಸಂಪರ್ಕಿಸಿ ಅವರಿಂದ ಹಣ ಪಡೆಯುವುದು ಇವರ ಪ್ರಮುಖ ಉದ್ದೇಶವಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುಎಸ್ ಪ್ರಜೆಗೆ ವಂಚನೆ: ಅಹಮದಾಬಾದ್ ಮೂಲದ ವ್ಯಕ್ತಿಯಿಂದ 7ಕೋಟಿ ರೂ. ಗೂ ಹೆಚ್ಚು ಮೌಲ್ಯದ ಕ್ರಿಪ್ಟೋಕರೆನ್ಸಿ ವಶಕ್ಕೆ ಪಡೆದ ಸಿಬಿಐ