ಹೈದರಾಬಾದ್: ಜಗ್ತಿಯಾಲ್ ಜಿಲ್ಲೆಯ ಎಸ್‌ಆರ್‌ಎಸ್‌ಪಿ ಕಾಲುವೆಗೆ ಮಂಗಳವಾರ ತಡರಾತ್ರಿ ಕಾರು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಶ್ರೀರಾಮ್ ಸಾಗರ್ ಪ್ರಾಜೆಕ್ಟ್ ಕಾಲುವೆಗೆ ಕಾರು ಬಿದ್ದ ಕೆಲವೇ ಗಂಟೆಗಳಲ್ಲಿ ಕಾರು ಸಹಿತ ಇಬ್ಬರ ಮೃತ ದೇಹಗಳನ್ನು ಪೊಲೀಸರು ಮೇಲಕ್ಕೆತ್ತಿದ್ದಾರೆ.
ಮೃತರನ್ನು ಪೌಡೇರಿ ರೇವಂತ್ ಮತ್ತು ಗುಂಡವೇಣಿ ಪ್ರಸಾದ್ ಎಂದು ಗುರುತಿಸಲಾಗಿದೆ. ಮೆಟ್ಪಲ್ಲಿಯಿಂದ ಆತ್ಮಕೂರು ಕಡೆಗೆ ಹೋಗುತ್ತಿದ್ದ ಕಾರು ಜಗ್ತಿಯಾಲ್ ಜಿಲ್ಲೆಯ ವೆಲ್ಲುಲ್ಲಾ ಗ್ರಾಮದ ಎಸ್‌ಆರ್‌ಎಸ್‌ಪಿ ಕಾಲುವೆಗೆ ಆಕಸ್ಮಿಕವಾಗಿ ಬಿದ್ದಿದೆ. ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಕ್ರೇನ್ ಸಹಾಯದಿಂದ ಕಾರು ಹಾಗೂ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಘಟನೆ:
ವೆಲ್ಲುಲ್ಲಾದ ಹೊರವಲಯದಲ್ಲಿರುವ ಎಸ್‌ಆರ್‌ಎಸ್‌ಪಿ ಸೇತುವೆಯ ತಡೆಗೋಡೆ/ಕಂಬಿ ಕುಸಿದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ವೆಲ್ಲುಲ್ಲಾ ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಮಧ್ಯರಾತ್ರಿ ಕಾರು ಹೋಗುತ್ತಿರುವುದು ಕಂಡುಬಂದಿದೆ. ಆದರೆ ಪರಿಶೀಲನೆ ಮಂದುವರಿಸಿದಾಗ ಕಾರು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆ ವೇಳೆ ಕಾರು ಕಾಲುವೆಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಇತ್ತ ಮೆಟ್ಪಲ್ಲಿ ಮೂಲದ ಪೌಡೇರಿ ರೇವಂತ್ ಹಾಗೂ ಗುಂಡವೇಣಿ ಪ್ರಸಾದ್ ಮಂಗಳವಾರ ಮಧ್ಯರಾತ್ರಿಯಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ವೆಲ್ಲುಲ್ಲಾ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿಸಿದಾಗ ಕಾರು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: VIDEO.. ಲಾಹೌಲ್ - ಸ್ಪಿತಿಯಲ್ಲಿ ಭಾರಿ ಹಿಮಪಾತ: ವಾಹನ ಸಂಚಾರ ಸಂಪೂರ್ಣ ಸ್ಥಗಿತ
ಕಾರು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಆ ಪ್ರದೇಶದಲ್ಲಿ ಜನ ಸೇರತೊಡಗಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೇತುವೆ ಕಂಬಿಗೆ ಕಾರು ಡಿಕ್ಕಿ ಹೊಡೆದು ಕಾಲುವೆಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಕಾಲುಯಿಂದ ನೀರು ಮೂಂದಕ್ಕೆ ಹರಿಯುವುದನ್ನು ಸ್ಥಗಿತಗೊಳಿಸಿದರು. ಈಜುಗಾರರು ಮತ್ತು ಪೊಲೀಸರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಂತಿಮವಾಗಿ ಇಬ್ಬರ ಮೃತದೇಹಗಳು ಮತ್ತು ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿದರು.