ನವದೆಹಲಿ: ಕೋವಿಡ್ನಿಂದ ಸಾವನ್ನಪ್ಪಿದ್ದ ಎಲ್ಲರಿಗೂ ಪರಿಹಾರವಾಗಿ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಕೋವಿಡ್ ಮೃತಪಟ್ಟವರಿಗೆ ಕನಿಷ್ಠ ಪರಿಹಾರ ಮತ್ತು ಹಣದ ನೆರವು ನೀಡಬೇಕೆಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ಈ ರೀತಿಯ ಪ್ರತಿಕ್ರಿಯೆ ನೀಡಿದೆ.
ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಭೂಕಂಪ, ಪ್ರವಾಹ ಇತ್ಯಾದಿ ಸಂದರ್ಭಗಳಲ್ಲಿ ಅನ್ವಯವಾಗಲಿದ್ದು, ಕೋವಿಡ್ನಿಂದ ಮೃತಪಟ್ಟವರಿಗೆ ಇಷ್ಟು ಮೊತ್ತದ ಪರಿಹಾರವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಕೋವಿಡ್ ರೋಗದಿಂದ ಭಾರತದಲ್ಲಿ ಈವರೆಗೂ ಸುಮಾರು 4 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವರದಿಗಳಲ್ಲಿ ಉಲ್ಲೇಖವಿದೆ. ಮೃತ ವ್ಯಕ್ತಿಯ ಪ್ರತಿ ಕುಟುಂಬಕ್ಕೂ 4 ಲಕ್ಷ ರೂಪಾಯಿಗಳ ಪರಿಹಾರ ನೀಡಿದರೆ ಎಸ್ಡಿಆರ್ಎಫ್ನಲ್ಲಿರುವ (ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿರುವ) ಸಂಪೂರ್ಣ ಹಣ ಖರ್ಚಾಗುತ್ತದೆ ಅಥವಾ ಇನ್ನೂ ಹೆಚ್ಚು ಹಣ ಬೇಕಾಗಬಹುದು ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ಹೇಳಿದೆ.
ಇನ್ನೂ ಮುಂದುವರೆದಂತೆ ಕೋವಿಡ್ ಸಂತ್ರಸ್ತರಿಗೆ ಎಸ್ಡಿಆರ್ಎಫ್ನ ಎಲ್ಲಾ ಹಣ ಬಳಸಿದರೆ ವಿವಿಧ ಅಗತ್ಯ ವೈದ್ಯಕೀಯ ಸೇವೆಗಳು, ಇತರ ವಿಪತ್ತುಗಳ ಬಗ್ಗೆ ಕಾಳಜಿ ವಹಿಸಲು ರಾಜ್ಯಗಳಿಗೆ ಸಾಕಷ್ಟು ಹಣವಿಲ್ಲದಂತಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಮಾಡಿರುವ ಮನವಿ ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಹೊರೆಯಾಗುತ್ತದೆ ಎಂದು ಕೇಂದ್ರ ಹೇಳಿದೆ.
ವಿಮೆಗೆ ಕ್ರಮ
ಕೋವಿಡ್ ಎಲ್ಲಾ ವಿಪತ್ತುಗಳಿಂದ ಭಿನ್ನವಾಗಿದ್ದು, ಸಂತ್ರಸ್ಥರಿಗೆ ವಿಮಾ ಹಕ್ಕುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ವಿಮಾ ಕಂಪನಿಗಳಿಗೆ 442.4 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ವಿಮಾ ಹಕ್ಕುಗಳನ್ನು ನೀಡುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗಿದೆ ಎಂದು ಕೇಂದ್ರ ಹೇಳಿದೆ.
ಈವರೆಗೆ ಬಿಡುಗಡೆಯಾಗಿದ್ದು..
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಅಡಿಯಲ್ಲಿ ಕೋವಿಡ್ ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ 2019-20ರಲ್ಲಿ ಹೆಚ್ಚುವರಿ ಹಣವನ್ನು 1,113.21 ಕೋಟಿ ರೂಪಾಯಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ತಮಿಳುನಾಡು ಮಾಜಿ ಸಚಿವ ಎಂ.ಮಣಿಕಂದನ್ ಬೆಂಗಳೂರಿನಲ್ಲಿ ಅರೆಸ್ಟ್
ಕೋವಿಡ್ -19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತೆ ಪ್ಯಾಕೇಜ್ ಅಡಿಯಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಮೂಲಕ 8,257.89 ಕೋಟಿ ರೂಪಾಯಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.