ನವದೆಹಲಿ : ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ ವಿರುದ್ಧ ಬಿಜೆಪಿ ಶುಕ್ರವಾರ ನೇರ ವಾಗ್ದಾಳಿ ನಡೆಸಿದೆ. ಜಾರ್ಜ್ ಸೊರೊಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರವಲ್ಲದೆ ಇಡೀ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದು ವಾಸ್ತವದಲ್ಲಿ ಭಾರತದ ವಿರುದ್ಧದ ದಾಳಿಯಾಗಿದೆ. ಭಾರತ ಮತ್ತು ಯುದ್ಧದ ಮಧ್ಯೆ ಮೋದಿಯವರನ್ನು ಎಳೆದು ತರಲಾಗುತ್ತಿದೆ ಎಂದು ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸೊರೊಸ್ ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಿದ್ದಾರೆ ಮತ್ತು ಅವರು ತಮಗೆ ಬೇಕಾದ ಕೆಲವೇ ವ್ಯಕ್ತಿಗಳು ಬಾರತದಲ್ಲಿ ಸರ್ಕಾರ ನಡೆಸುವುದನ್ನು ನೋಡಲು ಬಯಸುತ್ತಾರೆ. ಆದರೆ ನಾವು ಈ ಹಿಂದೆ ವಿದೇಶಿ ಶಕ್ತಿಗಳನ್ನು ಸೋಲಿಸಿದ್ದೇವೆ ಮತ್ತು ಮುಂದೆಯೂ ಅವರನ್ನು ಸೋಲಿಸುತ್ತೇವೆ ಎಂದು ಸ್ಮೃತಿ ಇರಾನಿ ಸೊರೊಸ್ಗೆ ತಿರುಗೇಟು ನೀಡಿದರು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಗುರಿಯಾಗಿದೆ ಮತ್ತು ಮೋದಿ ತಮ್ಮ ದಾಳಿಯ ಕೇಂದ್ರಬಿಂದು ಎಂದು ಸೊರೊಸ್ ಘೋಷಿಸಿದ್ದರು. ಅವರು ದೇಶದಲ್ಲಿ ತಮ್ಮ ಹಿತಾಸಕ್ತಿ ರಕ್ಷಿಸುವ ಸರ್ಕಾರವನ್ನು ಬಯಸುತ್ತಾರೆಯೇ ಹೊರತು ಭಾರತದ ಹಿತಾಸಕ್ತಿ ರಕ್ಷಿಸುವ ಸರ್ಕಾರವನ್ನಲ್ಲ ಎಂದು ಇರಾನಿ ಹೇಳಿದರು. ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿರುವ ಸಮಯದಲ್ಲಿ ಮತ್ತು ಭಾರತವು ಯುಎಸ್, ಫ್ರಾನ್ಸ್ ಮತ್ತು ಇಂಗ್ಲೆಂಡಿನ ಪ್ರಧಾನಿಯಂಥ ಜಾಗತಿಕ ನಾಯಕರಿಂದ ಶ್ಲಾಘನೆ ಪಡೆಯುತ್ತಿರುವ ಸಮಯದಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಕೆಟ್ಟದಾಗಿ ಚಿತ್ರಿಸಲು ಬಯಸುವ ಉದ್ಯಮಿಗಳ ಸಾಮ್ರಾಜ್ಯಶಾಹಿ ಉದ್ದೇಶಗಳು ಬೆಳಕಿಗೆ ಬರುತ್ತಿವೆ ಎಂದು ಇರಾನಿ ಹೇಳಿದರು.
ಭಾರತ ಸೇರಿದಂತೆ ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಲು ಸೊರೋಸ್ 1 ಬಿಲಿಯನ್ ಡಾಲರ್ ನಿಧಿಯನ್ನು ಮೀಸಲಾಗಿರಿಸಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಈ ವ್ಯಕ್ತಿಯ ಉದ್ದೇಶವನ್ನು ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆ ಮತ್ತು ಸಮಾಜ ಖಂಡಿಸಬೇಕೆಂದು ಇರಾನಿ ಒತ್ತಾಯಿಸಿದರು.
ಹಲವಾರು ಹಿತಾಸಕ್ತಿಗಳೊಂದಿಗೆ ನಂಟು ಹೊಂದಿರುವ ಸೊರೋಸ್ (92), ಗೌತಮ್ ಅದಾನಿಯವರ ಉದ್ಯಮ ಸಾಮ್ರಾಜ್ಯ ಪತನವಾಗುತ್ತಿರುವುದರಿಂದ ಭಾರತದಲ್ಲಿ ಬಂಡವಾಳ ಹೂಡಿಕೆಯ ನಂಬಿಕೆ ಕುಸಿಯುತ್ತಿದೆ ಹಾಗೂ ಇದರಿಂದ ಭಾರತದ ಪ್ರಜಾಪ್ರಭುತ್ವ ಪುನರುಜ್ಜೀವನಗೊಳ್ಳಬಹುದು ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವವಾದಿ ಅಲ್ಲ ಎಂದು ಅವರು ಆರೋಪಿಸಿದ್ದಾರೆ.
ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಜಾಗತಿಕ ಉದ್ಯಮಿ ಜಾರ್ಜ್ ಸೊರೊಸ್, ಅದಾನಿ ಎಂಟರ್‌ಪ್ರೈಸಸ್ ಷೇರು ಮಾರುಕಟ್ಟೆಯಲ್ಲಿ ಹಣ ಸಂಗ್ರಹಿಸಲು ಪ್ರಯತ್ನಿಸಿ ವಿಫಲವಾಯಿತು. ಅದಾನಿ ಸ್ಟಾಕ್ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪ ಹೊತ್ತಿದ್ದಾರೆ. ಅವರ ಷೇರುಗಳು ತರಗೆಲೆಗಳಂತೆ ಕುಸಿದವು. ಇಷ್ಟಾದರೂ ಮೋದಿ ಮೌನವಾಗಿದ್ದಾರೆ. ಆದರೆ ಅವರು ಈ ವಿಷಯದ ಬಗ್ಗೆ ವಿದೇಶಿ ಹೂಡಿಕೆದಾರರ ಪ್ರಶ್ನೆಗಳಿಗೆ ಮತ್ತು ಸಂಸತ್ತಿನಲ್ಲಿ ಉತ್ತರಿಸಬೇಕಾಗುತ್ತದೆ ಎಂದಿದ್ದರು. ಇದು ಭಾರತದ ಫೆಡರಲ್ ಸರ್ಕಾರದ ಮೇಲೆ ಮೋದಿಯವರ ಹಿಡಿತವನ್ನು ಗಮನಾರ್ಹವಾಗಿ ದುರ್ಬಲಗೊಳಿಸುತ್ತದೆ ಮತ್ತು ಸಾಂಸ್ಥಿಕ ಸುಧಾರಣೆಗಳಿಗೆ ಅವಕಾಶ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಅದಾನಿ ಸಮೂಹದ ಮೇಲೆ ಜಂಟಿ ಸದನ ಸಮಿತಿಯಿಂದ ತನಿಖೆಯಾಗಲಿ: ಸಚಿನ್ ಪೈಲೆಟ್