ಮುಂಬೈ: ದೇಶಾದ್ಯಂತ ಸಾಕಷ್ಟು ಸಂಚಲನ ಸೃಷ್ಟಿಸಿದ ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಂಬೈ ಸೈಬರ್ ಸೆಲ್ ಪೊಲೀಸರು, ಆರೋಪಿಗಳು ಸುಲ್ಲಿ ಡೀಲ್ಸ್ ಆ್ಯಪ್ ಕೇಸ್ನಲ್ಲೂ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಬುಲ್ಲಿ ಬಾಯ್ ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿರುವ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಮತ್ತು ಮಯಾಂಕ್ ರಾವತ್ ಮುಂಬೈ ಕೋರ್ಟ್ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಂಬೈ ಪೊಲೀಸ್, ಆರೋಪಿಗಳು ಸುಲ್ಲಿ ಡೀಲ್ಸ್ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ ಆರೋಪಿಗಳು ಸುಲ್ಲಿ ಡೀಲ್ಸ್ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಲ್ಲಿ ಬಾಯ್ ಆ್ಯಪ್ ತಯಾರಕನಾದ ನೀರಜ್ ಬಿಷ್ಣೋಯ್ ನೆರವಿನಿಂದ ಅವರು ಅಪರಾಧದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ವಿಚಾರಣೆ ನಡೆಯಲಿದ್ದು, ಮೂವರೂ ಆರೋಪಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಜಾಮೀನು ನೀಡಿದರೆ ಅವರು ಪರಾರಿಯಾಗಬಹುದು ಅಥವಾ ಸಾಕ್ಷಿಗಳನ್ನು ನಾಶ ಮಾಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬುಲ್ಲಿ ಬಾಯಿ ಆ್ಯಪ್ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ನೀರಜ್ ಬಿಷ್ಣೋಯ್ ಮತ್ತು ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣದಲ್ಲಿ ಬಂಧಿತರಾಗಿರುವ ಓಂಕಾರೇಶ್ವರ್ ಠಾಕೂರ್ ಎಂಬ ಇಬ್ಬರನ್ನೂ ತಮ್ಮ ವಶಕ್ಕೆ ಪಡೆಯಲು ದೆಹಲಿಗೆ ತಂಡವನ್ನು ಕಳುಹಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಜೆಎನ್‌ಯುನ ಪಿಎಚ್‌ಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ!