ಬೆಗುಸರಾಯ್ (ಬಿಹಾರ): ಬಿಹಾರದಲ್ಲಿ ಸೇತುವೆಯೊಂದು ಕುಸಿದುಬಿದ್ದಿರುವ ಘಟನೆ ನಡೆದಿದೆ. ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗದೆ ಇರುವುದರಿಂದ ದೊಡ್ಡ ಅನಾಹುತ ತಪ್ಪಿದೆ.
ಬೆಗುಸರಾಯ್ ಜಿಲ್ಲೆಯಲ್ಲಿ ಗಂಡಕಿ ನದಿಗೆ ನಿರ್ಮಿಸಲಾಗಿದ್ದ ಸೇತುವೆ ಕುಸಿತಬಿದ್ದಿದೆ. ಕಳೆದ ಒಂಬತ್ತು ವರ್ಷಗಳಿಂದ ಸೇತುವೆ ನಿರ್ಮಾಣ ಹಂತದಲ್ಲಿದ್ದು, ಈ ನಡುವೆ ಸೇತುವೆಯ ಮಧ್ಯದಲ್ಲಿ ಬಿರುಕು ಬಿಟ್ಟು ಭಾಗಶಃ ಕುಸಿದು ಬಿದ್ದಿದೆ. ಈ ಸೇತುವೆಯನ್ನು 13.43 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, 2017 ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಸೇತುವೆಗೆ ಸಂಪರ್ಕ ರಸ್ತೆಯ ಕೊರತೆಯಿಂದಾಗಿ ವಾಹನ ಸಂಚಾರ ಪ್ರಾರಂಭವಾಗಿರಲಿಲ್ಲ.
ನಿರ್ಮಾಣವಾದ ಕೆಲವೇ ವರ್ಷಗಳಲ್ಲಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದುರಸ್ತಿ ಮಾಡದ ಹಿನ್ನಲೆ ಸೇತುವೆ ನೀರು ಪಾಲಾಗಿದೆ ಎನ್ನಲಾಗ್ತಿದೆ. ಮಾ ಭಗವತಿ ಕನ್‌ಸ್ಟ್ರಕ್ಷನ್ ಸಂಸ್ಥೆ ಈ ಸೇತುವೆಯನ್ನು ನಿರ್ಮಾಣ ಮಾಡಿತ್ತು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಲೋಕ ಜನಶಕ್ತಿ ಪಕ್ಷದ ನಾಯಕ ಸಂಜಯ್ ಕುಮಾರ್ ಯಾದವ್, ಸೇತುವೆ ನಿರ್ಮಾಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಉದ್ಘಾಟನೆಗೂ ಮುನ್ನವೇ ಸೇತುವೆ ಮುರಿದು ಬಿದ್ದಿದ್ದು, ಹಲವು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕೂಡಲೇ ಸೇತುವೆ ಗುತ್ತಿಗೆದಾರರನ್ನು ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಗುಜರಾತ್ನಲ್ಲಿ ಭಾರಿ ದುರುಂತ.. ಬ್ರಿಡ್ಜ್ ಕುಸಿದು 60ಕ್ಕೂ ಹೆಚ್ಚು ಜನ ದುರ್ಮರಣ