ಮುಂಬೈ(ಮಹಾರಾಷ್ಟ್ರ): ಕಿರುಕುಳ ನೀಡಿದ್ದರ ವಿರುದ್ಧ ದೂರು ಕೊಟ್ಟಿದ್ದಕ್ಕೆ ಕುಟುಂಬದ ಆರು ಮಂದಿಯನ್ನು ಗ್ರಾಮಸ್ಥರೆಲ್ಲರೂ ಸೇರಿಕೊಂಡು ಊರಿನ ಎಲ್ಲ ಕಾರ್ಯಕ್ರಮಗಳಿಂದ ಬಹಿಷ್ಕರಿಸಿದ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನ ಪಶ್ಚಿಮ ಉಪನಗರದ ಶಿಂಪೋಲಿ ಎಂಬಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಕ್ಕೆ ಊರಿನ ಮೂವರ ವಿರುದ್ಧ ಆಕೆ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದನ್ನು ವಾಪಸ್ ಪಡೆಯಲು ಮಹಿಳೆ ಮತ್ತು ಆಕೆಯ ಕುಟುಂಬದ ಮೇಲೆ ಗ್ರಾಮಸ್ಥರು ಒತ್ತಡ ಹಾಕಿದರು. ಆದರೆ, ಇದಕ್ಕೆ ಅವರು ಸುತಾರಾಂ ಒಪ್ಪಿಗೆ ನೀಡಿಲ್ಲ.
ಏಪ್ರಿಲ್ನಲ್ಲಿ ಗ್ರಾಮ ಪಂಚಾಯಿತಿ ಸಭೆ ಕರೆದು, ದೂರು ನೀಡಿದ ಮಹಿಳೆ ಮತ್ತು ಕುಟುಂಬವನ್ನು ಆಹ್ವಾನಿಸಿದೆ. ಅಲ್ಲಿ ನೀಡಿದ ದೂರು ವಾಪಸ್ ಪಡೆಯಲು ಮರು ಒತ್ತಡ ಹಾಕಲಾಗಿದೆ. ದರೆ, ಮಹಿಳೆ ಇದಕ್ಕೆ ಸೊಪ್ಪು ಹಾಕಿಲ್ಲ. ಇದರಿಂದ ಕೆರಳಿದ ಗ್ರಾಮ ಪಂಚಾಯಿತಿ ಸಭೆ, ಅವರ ವಿರುದ್ಧ ಬಹಿಷ್ಕಾರ ಠರಾವು ಹೊರಡಿಸಿದೆ.
ಇಷ್ಟಲ್ಲದೇ, ಕುಟುಂಬಸ್ಥರಿಗೆ ಜನರು ಇನ್ನಷ್ಟು ಕಿರುಕುಳ ನೀಡಲು ಆರಂಭಿಸಿದ್ದಾರೆ. ಪಂಚಾಯಿತಿಯಿಂದ ಪತ್ರ ರವಾನಿಸಿ, ಊರಿನ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗುವಂತಿಲ್ಲ ಎಂದು ಸೂಚಿಸಲಾಗಿದೆ. ಈ ನಡೆಯ ವಿರುದ್ಧ ಮಹಿಳೆ ಮತ್ತು ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾನೂನುಬಾಹಿರವಾಗಿ ತಮ್ಮನ್ನು ಊರಿನ ಜನರು ಬಹಿಷ್ಕರಿಸಿದ್ದಾರೆ. ನ್ಯಾಯ ಕೊಡಿಸಬೇಕು ಎಂದು ಆಕೆ ಒತ್ತಾಯಿಸಿದ್ದಾರೆ. ಮಹಿಳೆಯ ದೂರಿನಂತೆ ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಊರಿನ ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಓದಿ: ಕಿಡ್ನಾಪ್ ಆ್ಯಂಡ್ ಮರ್ಡರ್ ಕೇಸ್.. ಮತ್ತೆ ಐವರ ಬಂಧನ, ಬಯಲಾಯ್ತು ಕೊಲೆ ಹಿಂದಿನ ಅಸಲಿಯತ್ತು