ಈ ಹಿಂದಿನ ಕೋವಿಡ್ ರೂಪಾಂತರಿಗಳಿಗೆ ಈ ಮೊದಲು ನೀಡಿರುವ ಕೋವಿಡ್ ಲಸಿಕೆಗಳು ಸರಿಹೋಗಬಹುದು. ಆದರೆ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್‌ಗೆ ಬೂಸ್ಟರ್ ಡೋಸ್ ಅವಶ್ಯಕ ಎಂದು ಒಮಿಕ್ರಾನ್ ಪತ್ತೆಯಾದ ಆರಂಭದಿಂದಲೂ ತಜ್ಞರು ಹೇಳುತ್ತಾ ಬಂದಿದ್ದಾರೆ. ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದೀಗ ಕೋವಿಡ್ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್ ಡೋಸ್ ಶೇ.88ರಷ್ಟು ಹೆಚ್ಚಿಸುತ್ತದೆ ಎಂದು ಇಂಗ್ಲೆಂಡ್ನ ಎರಡು ಹೊಸ ಅಧ್ಯಯನಗಳು ತಿಳಿಸಿವೆ.
ಯುನೈಟೆಡ್ ಕಿಂಗ್ಡಮ್ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ನೇತೃತ್ವದಲ್ಲಿ ಈ ಅಧ್ಯಯನಗಳನ್ನು ನಡೆಸಲಾಗಿದೆ. ಲಸಿಕೆ ಪಡೆಯದ ಒಮಿಕ್ರಾನ್ ಸೋಂಕಿತರಿಗೆ ಹೋಲಿಸಿದರೆ ಮೂರು ಡೋಸ್ಗಳನ್ನು ಪಡೆದ ಒಮಿಕ್ರಾನ್ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಗಣನೀಯ ಇಳಿಕೆ (ಶೇ.81ರಷ್ಟು) ಕಂಡುಬಂದಿದೆ. ಆದರೂ ಕೂಡ ಡೆಲ್ಟಾ ರೂಪಾಂತರಿಗೆ ಹೋಲಿಕೆ ಮಾಡಿದರೆ ಒಮಿಕ್ರಾನ್ ಸೋಂಕಿತರಲ್ಲಿ ಲಸಿಕೆಯ ಪರಿಣಾಮಕಾರಿತ್ವ 10 ವಾರಗಳ ಬಳಿಕ ಕ್ಷೀಣಿಸುತ್ತದೆ ಎಂದು ಮೊದಲ ಅಧ್ಯಯನವು ತಿಳಿಸಿದೆ.
ಎರಡನೇ ಅಧ್ಯಯನದಲ್ಲಿ, ರೋಗಲಕ್ಷಣವಿರುವ ಪ್ರಕರಣಗಳನ್ನು ಆಸ್ಪತ್ರೆಗೆ ದಾಖಲಾದ ಡೇಟಾಗೆ ಲಿಂಕ್ ಮಾಡಿದ್ದಾರೆ. ಕೋವಿಡ್ ಲಸಿಕೆಯ ಮೂರು ಡೋಸ್‌ಗಳ ನಂತರವೂ ಪ್ರಪಂಚದಾದ್ಯಂತ ಹಲವರಿಗೆ ಒಮಿಕ್ರಾನ್ ಅಂಟಿದೆ. ಆದರೆ ವ್ಯಾಕ್ಸಿನ್ ಪಡೆಯದ ಒಮಿಕ್ರಾನ್ ಸೋಂಕಿತರಿಗೆ ಹೋಲಿಸಿದರೆ ಈ ಪ್ರಮಾಣ ಶೇ.68ರಷ್ಟು ಕಡಿಮೆಯಿದೆ ಎಂದು ಸಂಶೋಧಕರು ಹೇಳುತ್ತಾರೆ.
ಅಸ್ಟ್ರಾಜೆನೆಕಾ ವ್ಯಾಕ್ಸಿನ್ನ ಎರಡು ಡೋಸ್ ಪಡೆದವರಲ್ಲಿ 20 ವಾರಗಳಿಂದ ಬಳಿಕ ಒಮಿಕ್ರಾನ್ ವಿರುದ್ಧ ಆ ಲಸಿಕೆ ಪರಿಣಾಮಕಾರಿಯಾಗಿ ಹೋರಾಡಿಲ್ಲ. ಇನ್ನು ಫೈಜರ್ ಅಥವಾ ಮಾಡರ್ನಾ ಪಡೆದವರಲ್ಲಿ, 20 ವಾರಗಳ ನಂತರ ಪರಿಣಾಮಕಾರಿತ್ವವು ಸುಮಾರು ಶೇ.65 ರಿಂದ ಶೇ. 70ಕ್ಕೆ ಇಳಿದಿದೆ.
ಇದನ್ನೂ ಓದಿ: ಒಮಿಕ್ರಾನ್ ಆತಂಕ: ಈ ದೇಶದ ಜನರಿಗೆ 4ನೇ ಡೋಸ್ ನೀಡಲು ಮುಂದಾದ ಸರ್ಕಾರ
ಆದರೆ ಬೂಸ್ಟರ್ ಡೋಸ್ ನಂತರ ಎರಡರಿಂದ ನಾಲ್ಕು ವಾರಗಳ ನಂತರ ಲಸಿಕೆ ಪರಿಣಾಮಕಾರಿತ್ವವು ಸುಮಾರು 65 ರಿಂದ 75 ಪ್ರತಿಶತದವರೆಗೆ ಇರುತ್ತದೆ. 5 ರಿಂದ 9 ವಾರಗಳಲ್ಲಿ 55 ರಿಂದ 70 ಪ್ರತಿಶತಕ್ಕೆ ಇಳಿಯುತ್ತದೆ. 10 ವಾರಗಳ ಬಳಿಕ 40 ರಿಂದ 50 ಪ್ರತಿಶತದಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್‌ಗೆ ಬೂಸ್ಟರ್ ಡೋಸ್‌ಗಳ ಪರಿಣಾಮಕಾರಿತ್ವವು ಗಮನಾರ್ಹವಾಗಿ ಕಡಿಮೆಯಾಗಿದೆ ಮತ್ತು ವೇಗವಾಗಿ ಕ್ಷೀಣಿಸುತ್ತದೆ ಎಂದು ಅಧ್ಯಯನವು ತೋರಿಸಿದೆ. ಲಸಿಕೆಯ ಎರಡು ಡೋಸ್‌ಗಳ ಪರಿಣಾಮಕಾರಿತ್ವವು 6 ತಿಂಗಳ ಬಳಿಕ ಶೇ.52ರಷ್ಟು ಕ್ಷೀಣಿಸುತ್ತದೆ. ಆದರೆ ರೋಗಲಕ್ಷಣದ ಪ್ರಕರಣವಾಗುವುದರ ಅಂದರೆ ಆಸ್ಪತ್ರೆಗೆ ದಾಖಲಾಗುವುದರ ವಿರುದ್ಧ ಬೂಸ್ಟರ್ ಡೋಸ್ 88 ಪ್ರತಿಶತದಷ್ಟು ರಕ್ಷಣೆ ನೀಡುತ್ತದೆ ಎಂದು ವೈದ್ಯ-ವಿಜ್ಞಾನಿ ಮತ್ತು ಆಣ್ವಿಕ ಔಷಧದ ಪ್ರಾಧ್ಯಾಪಕ ಮತ್ತು ಸ್ಕ್ರಿಪ್ಪ್ಸ್ ರಿಸರ್ಚ್ ಟ್ರಾನ್ಸ್ಲೇಷನಲ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಎರಿಕ್ ಟೋಪೋಲ್ ಮಾಹಿತಿ ನೀಡಿದ್ದಾರೆ.