ಮುಂಬೈ (ಮಹಾರಾಷ್ಟ್ರ): 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ. ಇಬ್ಬರು ಪ್ರೇಮ ಸಂಬಂಧ ಹೊಂದಿದ್ದರು. ಆಪಾದಿತ ಲೈಂಗಿಕ ಸಂಬಂಧವು ಆಕರ್ಷಣೆಯಿಂದಾಗಿ ಹೊರತು ಕಾಮದಿಂದಲ್ಲ. ಸಂತ್ರಸ್ತೆ ತಾನು ಸ್ವಯಂಪ್ರೇರಣೆಯಿಂದ ತನ್ನ ಮನೆಯನ್ನು ತೊರೆದು 26 ವರ್ಷದ ಆರೋಪಿಯೊಂದಿಗೆ ವಾಸವಾಗಿದ್ದಾಳೆ ಎಂದು ಉಚ್ಛ ನ್ಯಾಯಾಲಯ ತಿಳಿಸಿದೆ.
ಪ್ರೇಮ ಸಂಬಂಧದಿಂದ ಸಂತ್ರಸ್ತೆಯು ಆರೋಪಿಯ ಪರವಾಗಿಯೇ ಇದ್ದಾರೆ. ಇದೇ ಕಾರಣದಿಂದ ಅವರು ಒಟ್ಟಿಗೆ ಸೇರುತ್ತಾರೆ. ಹೀಗಾಗಿ ವಯಸ್ಸಿನ ಕಾರಣದಿಂದ ಸಂತ್ರಸ್ತೆಯ ಒಪ್ಪಿಗೆ ಇರಬೇಕು ಎಂಬುವುದು ಅಪ್ರಸ್ತುತ. ಅಪಾದಿತ ಘಟನೆಯು ಬಲವಂತದ ದೈಹಿಕ ಹಲ್ಲೆಯ ಪ್ರಕರಣಕ್ಕಿಂತ ಹೆಚ್ಚಾಗಿ ಇಬ್ಬರ ನಡುವಿನ ಒಮ್ಮತದ ಸಂಬಂಧವನ್ನು ಸೂಚಿಸುತ್ತದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ: ಅಮರಾವತಿ ಜಿಲ್ಲೆಯಲ್ಲಿ 2020ರ ಆಗಸ್ಟ್ 23ರಂದು ವ್ಯಕ್ತಿಯೊಬ್ಬರು ತನ್ನ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪುಸ್ತಕ ತಂದುಕೊಳ್ಳುವ ನೆಪದಲ್ಲಿ ಮನೆಯಿಂದ ಹೊರಟು ಹೋಗಿ ಮರಳಿ ಬಂದಿಲ್ಲ ಎಂದು ಬಾಲಕಿಯ ತಂದೆ ತಮ್ಮ ದೂರಿನಲ್ಲಿ ತಿಳಿಸಿದ್ದರು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಿದ್ದರು. ನಂತರ ಬಾಲಕಿ ಮತ್ತು ತನ್ನ ನೆರೆಹೊರೆಯ ನಿತಿನ್ ದಾಮೋದರ್ ಧಾಬೇರಾವ್ ಎಂಬಾತನ ನಡುವಿನ ಪ್ರೇಮ ಸಂಬಂಧ ಬಹಿರಂಗವಾಗಿತ್ತು. ಮದುವೆ ಆಗುವ ಭರವಸೆ ನೀಡಿದ್ದರಿಂದ ಬಾಲಕಿ ತನ್ನ ಮನೆಯಿಂದ ಆಭರಣಗಳು ಮತ್ತು ಹಣವನ್ನು ತೆಗೆದುಕೊಂಡು ಆತನದೊಂದಿಗೆ ಹೋಗಿರುವುದಾಗಿಯೂ ತಿಳಿಸಿದ್ದಳು.
ಅಲ್ಲದೇ, ಅದೇ ವರ್ಷ ಆಗಸ್ಟ್ 29ರಂದು ಈ ಬಾಲಕಿ ತನ್ನ ಅಜ್ಜಿಯೊಂದಿಗೆ ಬೆಂಗಳೂರಿನಲ್ಲಿ ಇರುವುದಾಗಿ ಹೇಳಿದ್ದಳು. ಇದಾದ ಬಳಿಕ ಆರೋಪಿ ನಿತಿನ್ ದಾಮೋದರ್ ಧಾಬೇರಾವ್ನನ್ನು ಆಗಸ್ಟ್ 30ರಂದು ಪೊಲೀಸರು ಬಂಧಿಸಿದ್ದರು. ಪೋಕ್ಸೋ ಸೇರಿ ವಿವಿಧ ಕಾಯ್ದೆಗಳಡಿ ಅಕ್ಟೋಬರ್ 26ರಂದು ಚಾರ್ಜ್ ಶೀಟ್ ದಾಖಲಿಸಿದ್ದರು. ಮತ್ತೊಂದೆಡೆ, ಆರೋಪಿ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ವೇಳೆ ಆರೋಪಿ ಧಾಬೇರಾವ್ ಪರ ವಕೀಲ ಎಸ್.ಎಸ್.ಜಾಧವ್ ವಾದ ಮಂಡಿಸಿ, ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವಳಾಗಿದ್ದರೂ, ಆರೋಪಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾಳೆ. ಅಲ್ಲದೇ, ಸ್ವಯಂ ಪ್ರೇರಣೆಯಿಂದ ತನ್ನ ಪೋಷಕರ ಮನೆ ತೊರೆದಿದ್ದಾಳೆ. ಜೊತೆಗೆ ಬಾಲಕಿಗೆ ನೀಡಿದ್ದ ಯಾವುದೇ ಭರವಸೆಯನ್ನು ಉಲ್ಲಂಘಿಸುವ ಉದ್ದೇಶವಿಲ್ಲ. ಮೇಲಾಗಿ ಸಂತ್ರಸ್ತೆಯು ಬಲವಂತದ ಲೈಂಗಿಕ ಸಂಭೋಗ ಹೊಂದಿಲ್ಲ. ವೈದ್ಯಕೀಯ ಪ್ರಮಾಣಪತ್ರಗಳ ಪ್ರಕಾರ, ಬಾಹ್ಯ ಗಾಯಗಳ ಯಾವುದೇ ಕುರುಹುಗಳು ಇಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.
ಮತ್ತೊಂದೆಡೆ, ಪ್ರತಿವಾದಿ ಪರ ವಕೀಲೆ ದೀಪಾಲಿ ಪಿ.ಶಹಾರೆ, ಬಾಲಕಿಯು ತನ್ನ ಮನೆಯನ್ನು ತಾನಾಗಿಯೇ ತೊರೆದಿದ್ದರೂ, ಆರೋಪಿ ಪ್ರಬುದ್ಧ ವ್ಯಕ್ತಿ. ಆತನ ಕೃತ್ಯದ ಪರಿಣಾಮ ತಿಳಿದು ಆಕೆಯನ್ನು ಬಲವಂತದ ಲೈಂಗಿಕ ಸಂಭೋಗಕ್ಕೆ ಒಳಪಡಿಸಿದ್ದಾನೆ ಎಂದು ವಾದಿಸಿದರು. ಆದರೆ, ನ್ಯಾಯಾಲಯವು ವಯಸ್ಸಿನ ಕಾರಣದಿಂದ ಸಂತ್ರಸ್ತೆಯ ಒಪ್ಪಿಗೆಯು ಅಪ್ರಸ್ತುತವಾಗಿದೆ. ತನಿಖಾಧಿಕಾರಿ ದಾಖಲಿಸಿದ ಹೇಳಿಕೆಗಳು ಸಹ ಆಕೆಯು ಸ್ವಯಂಪ್ರೇರಿತವಾಗಿ ಮನೆಯನ್ನು ತೊರೆದಿದ್ದಾಳೆ ಎಂಬುವುದಾಗಿ ಸೂಚಿಸುತ್ತವೆ ಎಂದು ತಿಳಿಸಿತು. ಅಲ್ಲದೇ, ನ್ಯಾಯಾಲಯವು ಆರೋಪಿಗೆ 25,000 ರೂ.ಗಳ ವೈಯಕ್ತಿಯ ಬಾಂಡ್ ಮೇಲೆ ಜಾಮೀನು ನೀಡಿತು.