ಮಂಡಿ (ಹಿಮಾಚಲ ಪ್ರದೇಶ): ಬೊಲೆರೋ ಕಾರೊಂದು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ಇಲ್ಲಿನ ಕಮ್ರುನಾಗ್ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಸುಂದರನಗರ ನಿವಾಸಿಗಳಾದ ಲಾಲಾ ರಾಮ್ (50), ರೂಪ್ ಲಾಲ್ (55), ಸುನೀಲ್ ಕುಮಾರ್ (35), ಗೋಬಿಂದ್ ರಾಮ್ (60) ಹಾಗೂ ಮೋಹ್ನಾ (55) ಎಂದು ಗುರುತಿಸಲಾಗಿದೆ. ಅನಿಲ್ ದತ್, ಸಂಜೀವ್ ಕುಮಾರ್, ಕಿರ್ಪಾ ರಾಮ್ ಮತ್ತು ಕಮಲ್ ಕುಮಾರ್ ಎಂಬುವವರು ಗಾಯಗೊಂಡಿದ್ದಾರೆ. ಇವರನ್ನು ನೆರ್ಚೌಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೊಲೆರೋ ಕಾರಿನಲ್ಲಿ ಎಲ್ಲರೂ ಕಮ್ರುನಾಗ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ, ಸುಂದರನಗರ - ಕರ್ಸೋಗ್ ರಸ್ತೆಯ ಖುಶಾಲಾ ಬಳಿ ಕಾರು ಕಮರಿಗೆ ಬಿದ್ದಿದೆ. ಚಾಲಕನ ಮೇಲೆ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಘಟನೆಯಲ್ಲಿ ಚಾಲಕ ಸಹ ಗಾಯಗೊಂಡಿದ್ದಾನೆ. ಆದರೆ, ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಪರಿಹಾರ ಕಾರ್ಯ ನಡೆಸಿ ಗಾಯಾಳುಗಳು ಮತ್ತು ಮೃತರ ಮೃತದೇಹಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ವಿಷಯ ತಿಳಿದಿ ಶಾಸಕ ವಿನೋದ್ ಕುಮಾರ್ ಕೂಡ ತಡರಾತ್ರಿ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಎಲ್ಲ ರೀತಿಯ ನೆರವು ಕಲ್ಪಿಸುವ ಭರವಸೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಮೂವರು ಸಾವು: ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಶುಕ್ರವಾರ ವಾಹನವೊಂದು ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಲ್ಲಿನ ನಿರ್ಮಾಣ ಹಂತದಲ್ಲಿರುವ ಕೇರು ಜಲ ವಿದ್ಯುತ್ ಯೋಜನೆಗೆ ಸೇರಿದ ಖಾಸಗಿ ವಾಹನ ಇದಾಗಿದೆ ಎಂದು ತಿಳಿದು ಬಂದಿದೆ.
ಟ್ರಕ್ವೊಂದು ಜನರನ್ನು ಹೊತ್ತೊಯ್ಯುತ್ತಿತ್ತು. ಕೇರು ಜಲ ವಿದ್ಯುತ್ ಯೋಜನೆ ಕಾಮಗಾರಿ ಸ್ಥಳದ ಕಡೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಕಮರಿಗೆ ಉರುಳಿದೆ. ಇದರಿಂದ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಚಾಲಕ ಬಾದಲ್ ಕುಮಾರ್, ಅಶ್ಫಾಕ್ ಹುಸೇನ್ ಮತ್ತು ಚಂಜಗು ರಾಮ್ ಎಂದು ಗುರುತಿಸಲಾಗಿದೆ. ಮೂವರೂ ಕಿಶ್ತ್ವಾರ್ ನಿವಾಸಿಗಳಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ವಿಷಯ ತಿಳಿದು ಸ್ಥಳೀಯ ಜನರು ಮತ್ತು ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಹೊರತೆಗೆದರು. ಸದ್ಯ ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ರಸ್ತೆ ಅಪಘಾತದಲ್ಲಿ ಅಧಿಕಾರಿ, ಪತ್ನಿ, ಮಗ ಸಾವು, ಮಗಳು ಗಂಭೀರ