ಅಮರಾವತಿ (ಆಂಧ್ರಪ್ರದೇಶ): ಹಣದ ಮಳೆ ಸುರಿಸುತ್ತೇನೆ ಎಂದು ಹೇಳಿ ಭಕ್ತರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಮಾಂತ್ರಿಕನನ್ನು ಕೊಲೆ ಮಾಡಿರುವ ಘಟನೆ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ವಂಚನೆಗೊಳಗಾದ ಭಕ್ತರೇ ಮಾಂತ್ರಿಕನನ್ನು ತುಳಿದು ಹತ್ಯೆಗೈದಿದ್ದಾರೆ. ಚಂದೂರು ರೈಲ್ವೆ ತಾಲೂಕಿನ ಶಿವನಿ ಶೇಟ್ ಶಿವರಾದಲ್ಲಿ ಆಗಸ್ಟ್ 15ರಂದು ಘಟನೆ ನಡೆದಿದೆ. ರಮೇಶ್ ಮೆಶ್ರಮ್ (65) ಕೊಲೆಯಾದ ವ್ಯಕ್ತಿ. ಚಂದೂರು ರೈಲ್ವೆ ಪೊಲೀಸರು ಐವರು ಆರೋಪಿಗಳನ್ನು ಬುಧವಾರ ನಾಗ್ಪುರದಲ್ಲಿ ಬಂಧಿಸಿದ್ದಾರೆ.
ಘಟನೆಯ ಸಂಪೂರ್ಣ ವಿವರ: ಚಂದೂರು ರೈಲ್ವೇ ಪೇಟೆಯ ಮಿಲಿಂದ್ ನಗರ ಪ್ರದೇಶದಲ್ಲಿ ವಾಸವಾಗಿದ್ದ ಮಾಂತ್ರಿಕ ರಮೇಶ್ ಮೆಶ್ರಮ್ ಹಣದ ಮಳೆ ಸುರಿಸುತ್ತೇನೆ ಎಂದು ಹೇಳಿ ಭಕ್ತರಿಂದ ಹಣ ವಸೂಲಿ ಮಾಡಿದ್ದಾನೆ. ಅದರಂತೆ ಅಘೋರಿ ಪೂಜೆ ಮಾಡುತ್ತೇನೆ ಎಂದು ಆಗಸ್ಟ್ 15ರಂದು ಭಕ್ತರನ್ನು ಕರೆಸಿ ಶಿವನಿಯಲ್ಲಿ ಪೂಜೆ ಮಾಡಿದ್ದಾನೆ. ನಾಗ್ಪುರದ ಬಾಬುರಾವ್ ಮೆಶ್ರಮ್ (45), ಅಕ್ರಮ್ ಯಾಕೂಬ್ (23), ಕಮಲಾಕರ್ ಚಾರ್ಪೆ (44), ರಾಜೇಶ್ ಯೆಸನ್ಸುರೆ (28) ಹಾಗೂ ಮಯೂರ್ ಮಡ್ಗಿಲ್ವಾರ್ (26) ಪೂಜೆಗೆ ಬಂದಿದ್ದರು. ಪೂಜೆಯ ನಂತರ ಹಣದ ಮಳೆಯಾಗುತ್ತದೆ ಎಂದು ಕಾದು ಕುಳಿತಿದ್ದ ಐವರೂ ಬಹಳ ಹೊತ್ತು ಕಾದರೂ ಹಣದ ಮಳೆಯಾಗದೇ ಇರುವುದನ್ನು ಗಮನಿಸಿ, ಮಾಂತ್ರಿಕನನ್ನು ಪ್ರಶ್ನಿಸಿದ್ದಾರೆ. ಮಾಂತ್ರಿಕ ಹಾಗೂ ಭಕ್ತರು ನಡುವೆ ಮಾತಿನ ಚಕಮಕಿ ನಡೆದಿದೆ.
ತಮ್ಮಿಂದ ಪಡೆದ ಹಣ ಮರಳಿಸುವಂತೆ ಭಕ್ತರು ಒತ್ತಾಯಿಸಿದ್ದಾರೆ. ಈ ವೇಳೆ ರಮೇಶ್ ಮೆಶ್ರಮ್ ಐವರಿಗೆ ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ರಮೇಶ್ ಮೆಶ್ರಮ್ ಅವತಾರ ಕಂಡು ಭಯಗೊಂಡ ಐವರೂ ಸೇರಿ, ಆತ ಏನಾದರು ಮಾಡುವ ಮೊದಲೇ ಮನಬಂದಂತೆ ಥಳಿಸಿದ್ದಾರೆ. ಕೈಗೆ ಸಿಕ್ಕ ಪಂಜಿನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಬಲವಾಗಿ ಪೆಟ್ಟು ಬಿದ್ದು ರಮೇಶ್ ಕೆಳಗೆ ಬಿದ್ದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಆತನನ್ನು ನೋಡಿ, ತಕ್ಷಣ ಐವರೂ ಸ್ಥಳದಿಂದ ಪರಾರಿಯಾಗಿದ್ದರು.
ಪೊಲೀಸ್ ತನಿಖೆ: ಶಿವನಿ ನಗರದ ಶೇಟ್ ಶಿವಾರ ಗುಡಿಸಲಿನಲ್ಲಿ ಮಾಂತ್ರಿಕ ರಮೇಶ್ ಶವವಾಗಿ ಪತ್ತೆಯಾಗಿದ್ದ. ಆತನ ಪುತ್ರ ಪ್ರಜ್ವಲ್ ಆಗಸ್ಟ್ 15ರಂದು ರಾತ್ರಿ ಚಂದೂರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು. ಪ್ರಕರಣ ಭೇದಿಸಲು ಪ್ರಾರಂಭಿಸಿದ್ದ ಪೊಲೀಸರಿಗೆ ರಮೇಶ್ ಹಣದ ಮಳೆ ಬರಿಸುವುದಾಗಿ ಭಕ್ತರಿಂದ ಹಣ ವಸೂಲಿ ಮಾಡಿರುವುದು ಗೊತ್ತಾಗಿದೆ.
ತನಿಖೆಯಲ್ಲಿ ಮಾಂತ್ರಿಕನ ಸಂಪರ್ಕದಲ್ಲಿದ್ದ ಅನೇಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ರಮೇಶ್ ಮೊಬೈಲ್ ಫೋನ್ ಪರಿಶೀಲಿಸಿದಾಗ ನಾಗ್ಪುರದಿಂದ ಐವರು ಮಾಂತ್ರಿಕನನ್ನು ಭೇಟಿಯಾಗಲು ಬಂದಿದ್ದ ಮಾಹಿತಿ ಸಿಕ್ಕಿದೆ. ಈ ಆಧಾರದಲ್ಲಿ ಸ್ಥಳೀಯ ಅಪರಾಧ ವಿಭಾಗ ತಂಡ ನಾಗ್ಪುರಕ್ಕೆ ತೆರಳಿ ಬಾಬುರಾವ್ ಮೆಶ್ರಮ್, ಅಕ್ರಮ್ ಯಾಕೂಬ್, ಕಮಲಾಕರ್ ಚಾರ್ಪೆ, ರಾಜೇಶ್ ಯೆಸನ್ಸುರೆ ಹಾಗೂ ಮಯೂರ್ ಮಡ್ಗಿಲ್ವಾರ್‌ನನ್ನು ಬುಧವಾರ ಬಂಧಿಸಿದೆ. ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ವಾಂಖಡೆ ಮಾಹಿತಿ ನೀಡಿದರು.
ಇದನ್ನೂ ಓದಿ: ಕುಣಿಗಲ್ ಲಾಡ್ಜ್ನಲ್ಲಿ ಮಹಿಳೆ ಕೊಲೆ ಪ್ರಕರಣ: ಆರೋಪಿ ಬಂಧನ