ಲಕ್ನೋ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬ್ಲಾಕ್ ಪಂಚಾಯ್ತಿ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 625ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿರುವುದಾಗಿ ತಿಳಿದು ಬಂದಿದೆ. ಅದ್ಭುತ ಗೆಲವು ಸಾಧಿಸಿರುವುದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.
ಸಿಎಂ ಕಚೇರಿಯಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಅಭಿವೃದ್ಧಿ ಕಾರ್ಯಗಳ ಫಲವಾಗಿ ಈ ಗೆಲುವು ಸಿಕ್ಕಿದೆ ಎಂದಿದ್ದಾರೆ.
825 ಸ್ಥಾನಗಳ ಪೈಕಿ ಬಿಜೆಪಿ 735ರಲ್ಲಿ ಸ್ಪರ್ಧೆ ಮಾಡಿತ್ತು. 14 ಸೀಟ್ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಎಲ್ಲ ಸೀಟ್ಗಳ ಪೈಕಿ ಬಿಜೆಪಿ ಹಾಗೂ ಬೆಂಬಲಿತ ಅಭ್ಯರ್ಥಿಗಳು 625ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಕೂಡ 476 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಕಮಲ ಹೆಚ್ಚಿನ ಸೀಟು ಗೆದ್ದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: Watch Video: ಎರಡು ಪ್ರತ್ಯೇಕ ಘಟನೆಯಲ್ಲಿ ಹೊತ್ತಿ ಉರಿದ ಕಾರು; ಇಬ್ಬರು ದುರ್ಮರಣ
825 ಬ್ಲಾಕ್ ಪಂಚಾಯ್ತಿ ಅಧ್ಯಕ್ಷರ ಸೀಟ್ಗಳಿಗಾಗಿ 1,778 ನಾಮಪತ್ರ ಸಲ್ಲಿಕೆಯಾಗಿದ್ದವು. ಆದರೆ 187 ಮಂದಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದರು. ಉಳಿದಂತೆ 68 ನಾಮಪತ್ರ ರದ್ದುಗೊಂಡಿದ್ದವು. ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿರುವ 334 ಮಂದಿ ಬಿಜೆಪಿ ಪಕ್ಷಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.