ಮುಂಬೈ (ಮಹಾರಾಷ್ಟ್ರ): ಭಾರತೀಯ ಜನತಾ ಪಕ್ಷವು (ಬಿಜೆಪಿ) ಕೇಂದ್ರೀಯ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಬಳಸಿಕೊಂಡು ಮಹಾರಾಷ್ಟ್ರ ಸರ್ಕಾರಕ್ಕೆ ಬೆದರಿಕೆ ಹಾಕುತ್ತಿದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಲಾಗಿದೆ. ಅಲ್ಲದೇ ಮಹಾರಾಷ್ಟ್ರ ಬಿಜೆಪಿ ನಾಯಕರು ಇಡಿ ಮತ್ತು ಸಿಬಿಐ ತಮ್ಮ ಜೇಬಿನಲ್ಲಿದೆ ಎಂದುಕೊಂಡಿದ್ದಾರೆ. ಆ ಮೂಲಕ ತಮ್ಮ ಎದುರಾಳಿಗಳ ಬೆದರಿಸುತ್ತಿದ್ದಾರೆ ಎಂದು ಟೀಕಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ದಾದಾ ಪಾಟೀಲ್ ಕೋಲ್ಹಾಪುರದ ಹಸನ್ ಮುಶ್ರೀಫ್ ಅವರಿಗೆ ಬೆದರಿಕೆ ಹಾಕಿದ್ದಾರೆ. ಬಿಜೆಪಿಯ ಏಕೈಕ ನೀತಿಯೆಂದರೆ ರಾಜ್ಯದ ಅಭಿವೃದ್ಧಿಯನ್ನು ನಿಲ್ಲಿಸುವುದು ಮತ್ತು ಆಧಾರರಹಿತ ಆರೋಪ ಮಾಡುವ ಮೂಲಕ ಭಯ ಸೃಷ್ಟಿಸುವುದು ಎಂದು ಸಂಪಾದಕೀಯದಲ್ಲಿ ಆರೋಪಿಸಿದೆ.
ರಾಜ್ಯಪಾಲರಿಂದ ಹಿಡಿದು ಪ್ರತಿಪಕ್ಷ ನಾಯಕರವರೆಗೆ ಎಲ್ಲರೂ ಮಹಾರಾಷ್ಟ್ರ ಸರ್ಕಾರಕ್ಕೆ ಶತ್ರುಗಳಂತೆ ವರ್ತಿಸುತ್ತಿದ್ದಾರೆ. ಇಂತಹ ಒತ್ತಡದ ಬಳಿಕವೂ ಠಾಕ್ರೆ ಸರ್ಕಾರ ಬೀಳುತ್ತಿಲ್ಲ ಎಂಬುದು ಅವರ ನೋವಾಗಿದೆ ಎಂದು ಟೀಕಿಸಿದೆ.
ರಾಜ್ಯದಲ್ಲಿ ಯಾರೂ ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಕೇಂದ್ರದ ಏಜೆನ್ಸಿಗಳನ್ನು ಅವಹೇಳನ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ನಡವಳಿಕೆಯಿಂದ ಜನರು ಇಡಿ ಅಥವಾ ಸಿಬಿಐ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಯಾರು ಮಹಾರಾಷ್ಟ್ರ ಸರ್ಕಾರದ ಸಚಿವರ ವಿರುದ್ಧ ಆರೋಪ ಮಾಡುತ್ತಾರೋ ಅಂತಹವರಿಗೆ ಝಡ್ ಸೆಕ್ಯೂರಿಟಿ ಒದಗಿಸಿ ಕೇಂದ್ರ ಸರ್ಕಾರ ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುತ್ತಿದೆ ಎಂದಿದೆ.
ಇದನ್ನೂ ಓದಿ: ಆಸ್ತಿ ಸಂಬಂಧಿತ ವಿವಾದಗಳಿಂದ ದೇವಭೂಮಿಯಲ್ಲಿ ಈವರೆಗೆ 22 ಸಾಧುಗಳ ಹತ್ಯೆ