ಹೈದರಾಬಾದ್: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ (ಟಿಎಸ್‌ಪಿಎಸ್‌ಸಿ) ಪೇಪರ್ ಸೋರಿಕೆ ಪ್ರಕರಣದ ವಿಚಾರವಾಗಿ ಬಿಆರ್‌ಎಸ್ ಸರ್ಕಾರವನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಪ್ರತಿ ವರ್ಷ ಉದ್ಯೋಗ ಕ್ಯಾಲೆಂಡರ್ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಸಂಗಾರೆಡ್ಡಿ ಪಟ್ಟಣದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ 'ನಿರುದ್ಯೋಗ ಜಾಥಾ' (ನಿರುದ್ಯೋಗಿಗಳ ಬೆಂಬಲ ಮೆರವಣಿಗೆ) ಉದ್ದೇಶಿಸಿ ಅವರು ಮಾತನಾಡಿದರು. "ಬಿಆರ್‌ಎಸ್ ಆಡಳಿತದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಕುಟುಂಬದ ಹಲವಾರು ಸದಸ್ಯರಿಗೆ ಉದ್ಯೋಗ ಸಿಕ್ಕಿದೆ. ಆದರೆ ನಿರುದ್ಯೋಗಿ ಯುವಕರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೆಸಿಆರ್ ನಿರುದ್ಯೋಗಿಗಳ ಜೀವ ಕೇಳುತ್ತಿದ್ದಾರೆ. ಸಂಬಳ ನೀಡದ ಅವರಿಗೆ ಏಕೆ ಮತ ಹಾಕಬೇಕು. ಕೇಂದ್ರದ ಕಾಮಗಾರಿ ಭರ್ತಿಯಲ್ಲಿ ಎಲ್ಲಿಯೂ ಭ್ರಷ್ಟಾಚಾರ ನಡೆದಿಲ್ಲ. ಆದರೆ ಪಂಚಾಯತ್ ಕಾರ್ಯದರ್ಶಿಗಳಿಗೆ ಕೆಸಿಆರ್ ಅನ್ಯಾಯ ಮಾಡುತ್ತಿದ್ದಾರೆ" ಬಂಡಿ ಸಂಜಯ್ ಆರೋಪಿಸಿದರು.
ಟಿಎಸ್‌ಪಿಎಸ್‌ಸಿ ನಡೆಸಿದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಸರ್ಕಾರ ಆದೇಶಿಸಬೇಕು. ಆಪಾದಿತ ಪೇಪರ್ ಸೋರಿಕೆಯಿಂದ ನಷ್ಟ ಅನುಭವಿಸಿದ ಆಕಾಂಕ್ಷಿಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅವರು ಆಗ್ರಹಿಸಿದರು.
ಇದನ್ನೂ ಓದಿ: ಬಂಡಿ ಸಂಜಯ್ ಕುಮಾರ್ 'ಪ್ರಜಾ ಸಂಗ್ರಾಮ ಯಾತ್ರೆ'ಗೆ ಅನುಮತಿ ನಿರಾಕರಿಸಿದ ತೆಲಂಗಾಣ ಪೊಲೀಸರು
ಕರೀಂ ನಗರದ ಲೋಕಸಭಾ ಸದಸ್ಯ ಸಂಜಯ್ ಕುಮಾರ್ ಮಾತನಾಡಿ, "ಪೇಪರ್ ಸೋರಿಕೆ ತಡೆಯುವಲ್ಲಿ ವಿಫಲರಾಗಿರುವ ಐಟಿ ಸಚಿವ ಕೆ.ಟಿ ರಾಮರಾವ್ ಅವರನ್ನು ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಹಿಂದೆ ರಾಜ್ಯ ಸರ್ಕಾರ ನೇಮಿಸಿದ್ದ ಬಿಸ್ವಾಲ್ ಸಮಿತಿಯ ವರದಿಯಂತೆ ಖಾಲಿ ಇರುವ ಎರಡು ಲಕ್ಷ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯಲಿದೆ. ಅಧಿಕಾರ ಸ್ವೀಕರಿಸಿದ ಕೂಡಲೇ ನೇಮಕಾತಿ ಆರಂಭಿಸಲಾಗುವುದು" ಎಂದು ಭರವಸೆ ನೀಡಿದರು.
"ಸಕಾಲದಲ್ಲಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಕೃಷಿ ಸಾಲ ಮನ್ನಾ ಜಾರಿ ಮತ್ತು ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲಾಗುತ್ತಿಲ್ಲ" ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ಇದೇ ರೀತಿಯ 'ನಿರುದ್ಯೋಗ ಜಾಥಾ' ಕಾರ್ಯಕ್ರಮಗಳನ್ನು ಖಮ್ಮಂ, ಅದಿಲಾಬಾದ್ ಮತ್ತು ನಿಜಾಮಾಬಾದ್‌ನಲ್ಲಿ ಆಯೋಜಿಸಲಾಗುವುದು. ಅಂತಿಮವಾಗಿ ಹೈದರಾಬಾದ್‌ನಲ್ಲಿ ಲಕ್ಷಗಟ್ಟಲೆ ಜನರೊಂದಿಗೆ ಜಾಥಾ ಆಯೋಜಿಸಲಾಗುವುದು" ಎಂದರು. "ಈ ಹಿಂದೆ ವಾರಂಗಲ್ ಮತ್ತು ಮಹಬೂಬ್‌ನಗರದಲ್ಲಿ 'ನಿರುದ್ಯೋಗ ಜಾಥಾ' ನಡೆಸಲಾಗಿತ್ತು. ತಮ್ಮ ಪ್ರಬಲ ಹಿಂದುತ್ವದ ದೃಷ್ಟಿಕೋನಗಳಿಗೆ ಹೆಸರಾಗಿರುವ ಸಂಜಯ್ ಕುಮಾರ್ ಮೇ 14 ರಂದು ಹನುಮ ಜಯಂತಿಯಂದು ಕರೀಂನಗರದಲ್ಲಿ 'ಹಿಂದೂ ಏಕತಾ ಯಾತ್ರೆ' ಆಯೋಜಿಸಲಾಗುವುದು" ಎಂದು ಇದೇ ವೇಳೆ ಅವರು ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ವಶಕ್ಕೆ ಪಡೆದ ತೆಲಂಗಾಣ ಪೊಲೀಸ್.. ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ