ಗೊಂಡಾ (ಉತ್ತರ ಪ್ರದೇಶ): ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿಗಾಗಿ ಉತ್ತರ ಪ್ರದೇಶದ ತಮ್ಮದೇ ಸರ್ಕಾರದ ವಿರುದ್ಧ ಕೈಸರ್‌ಗಂಜ್ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಸಂಘದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಸಾಮಾನ್ಯ ಜನರು, ಸಂಸದರು, ಶಾಸಕರು ಮತ್ತು ಮಂತ್ರಿಗಳು ಸಹ ಪ್ರವಾಹದಿಂದ ತೊಂದರೆಗೀಡಾಗಿದ್ದಾರೆ. ಆದರೆ, ಆಡಳಿತವು ಯಾವುದೇ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯ, ಅದರಲ್ಲೂ ವಿಶೇಷವಾಗಿ ನವಾಬ್‌ಗಂಜ್‌ನಲ್ಲಿ ವಿಪರೀತ ಮಳೆಯಿಂದ ಅನಾಹುತ ಉಂಟಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಸಿಂಗ್, ಪ್ರವಾಹವನ್ನು ಎದುರಿಸುವಲ್ಲಿ ಆಡಳಿತ ಅಸಮರ್ಪಕವಾಗಿವೆ ಎಂದು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರತಿಯೊಂದು ಸರ್ಕಾರವೂ ಮಳೆಗಾಲದ ಮೊದಲು ಸಭೆಗಳನ್ನು ನಡೆಸುತ್ತದೆ ಮತ್ತು ರಾಜ್ಯದಲ್ಲಿ ಪ್ರವಾಹದಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಉತ್ತಮ ಸಿದ್ಧತೆ ಮಾಡಿಕೊಳ್ಳುತ್ತದೆ. ಆದರೆ, ಇಲ್ಲಿನ ಆಡಳಿತವು ಯಾವುದೇ ಸಭೆ ನಡೆಸಲಿಲ್ಲ. ಈಗ ಏನಾದರೂ ಸಲಹೆ ನೀಡಬೇಕೆಂದೂ ಪರಿಸ್ಥಿತಿ ಕೈ ಮೀರಿದೆ. ಪ್ರವಾಹ ಪರಿಸ್ಥಿತಿ ಹದಗೆಡುತ್ತಿದೆ. ಜನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡು, ದೇವರ ಮೇಲೆ ಅವಲಂಬಿತರಾಗಿದ್ದಾರೆ. ಪ್ರವಾಹ ನೀರು ಕಡಿಮೆಯಾಗಲು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರವಾಹ ಪೀಡಿತ ಗೊಂಡ ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಮಾಜಿ ಸಚಿವ ರಮಾಪತಿ ಶಾಸ್ತ್ರಿ, ತಮ್ಮ ಕಾರು ಬಿಟ್ಟು ಟ್ರ್ಯಾಕ್ಟರ್ ತೆಗೆದುಕೊಂಡು ತಮ್ಮ ನಿವಾಸಕ್ಕೆ ತೆರಳಬೇಕಾಯಿತು. ಎರಡು ದಶಕಗಳ ನಂತರ ಉತ್ತರ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ ಎಂದು ಶಾಸ್ತ್ರಿ ಹೇಳಿದ್ದಾರೆ. ಅಲ್ಲದೇ, ನವಾಬ್‌ಗಂಜ್ ಪುರಸಭೆಯ ಅಧ್ಯಕ್ಷ ಸತ್ಯೇಂದ್ರ ಸಿಂಗ್ ಮತ್ತು ಭದ್ರತಾ ಸಿಬ್ಬಂದಿ ಸಹ ಟ್ರಾಕ್ಟರ್‌ನಲ್ಲಿ ಪ್ರಯಾಣಿಸಿದ್ದಾರೆ.
ಇದನ್ನೂ ಓದಿ: 18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್ ದಂಪತಿ