ರಿಷಿಕೇಶ (ಉತ್ತರಾಖಂಡ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯಲ್ಲಿಯೇ ಮೊದಲ ಬಾರಿಗೆ ಉತ್ತರಾಖಂಡದಲ್ಲೂ ಕ್ರಮ ಕೈಗೊಳ್ಳಲಾಗಿದೆ. ರೆಸಾರ್ಟ್ ರಿಷೆಪ್ಸನಿಸ್ಟ್ ಆಗಿದ್ದ ಯುವತಿಯ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ, ಬಿಜೆಪಿ ನಾಯಕನ ಮಗನ ಒಡೆತನದ ರೆಸಾರ್ಟ್ ಅನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶದಂತೆ ರಿಷಿಕೇಶದಲ್ಲಿ ರೆಸಾರ್ಟ್ ಕೆಡವಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ರೆಸಾರ್ಟ್ನಲ್ಲಿ ರಿಷೆಪ್ಸನಿಸ್ಟ್ ಆಗಿದ್ದ 19 ವರ್ಷದ ಅಂಕಿತಾ ಭಂಡಾರಿ ಎಂಬ ಯುವತಿ ನಾಪತ್ತೆಯಾಗಿದ್ದಳು. ಬಳಿಕ ಯುವತಿಯ ಶವ ಸೆಪ್ಟೆಂಬರ್ 23ರಂದು ಪತ್ತೆಯಾಗಿದೆ. ಪ್ರಕರಣದಲ್ಲಿ ಹರಿದ್ವಾರದ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರರಾದ ರೆಸಾರ್ಟ್ ಮಾಲೀಕ ಪುಲ್ಕಿತ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಯನ್ನು ಕೊಂದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಷೆಪ್ಸನಿಸ್ಟ್ ಯುವತಿಯನ್ನು ಕೊಂದು, ಕಾಲುವೆಗೆ ಎಸೆದಿರುವ ಬಗ್ಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಯುವತಿ ನಾಪತ್ತೆ ಬೆನ್ನಲ್ಲೇ ಭಾರಿ ಪ್ರತಿಭಟನೆ ನಡೆದಿದ್ದವು. ಬಳಿಕ ಎಲ್ಲಾ ರೆಸಾರ್ಟ್ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶಿಸಿದ್ದರು. ಅಕ್ರಮ ನಡೆಸುತ್ತಿರುವ ರೆಸಾರ್ಟ್‌ಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶ ನೀಡಿದ್ದರು.
ಇದನ್ನೂ ಓದಿ: ಚಿನ್ನಕ್ಕಾಗಿ ಮಹಿಳೆ ಕೊಲೆ, ಗೆಳೆಯನ ಸಿಲುಕಿಸುವ ಯತ್ನ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?