ಜೈಪುರ: ಫೋನ್ ಟ್ಯಾಪಿಂಗ್ ಆರೋಪದ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ದಿಂದ ತನಿಖೆ ನಡೆಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಸಾರ್ವಜನಿಕ ಸುರಕ್ಷತೆ ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಫೋನ್‌ಗಳನ್ನು ಟ್ಯಾಪ್ ಮಾಡುವುದಕ್ಕೆ ಕಡಿವಾಣ ಹಾಕಬೇಕಿದೆ ಎಂಬ ಬಗ್ಗೆ ನಿನ್ನೆ ವಿಧಾನಸಭೆಯಲ್ಲಿ ಬಿಜೆಪಿ ಪ್ರಶ್ನೆ ಕೇಳಿತ್ತು. ಈ ಬಗ್ಗೆ ಸಿಎಂ ನೀಡಿದ ಉತ್ತರದಿಂದ ತೃಪ್ತಗೊಳ್ಳದ ಬಿಜೆಪಿ, ಸೂಕ್ತ ತನಿಖೆ ನಡೆಸಬೇಕು. ಇದರ ಜವಾಬ್ದಾರಿಯನ್ನ ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ.
ಈ ಸಂಬಂಧ ಪ್ರಶ್ನೆ ಕೇಳಿದ್ದ ಬಿಜೆಪಿ ಶಾಸಕ ಕಾಲಿಚರಣ್, ಇತ್ತೀಚಿನ ದಿನಗಳಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣಗಳು ವರದಿಯಾಗುತ್ತಿರುವುದು ನಿಜವೇ? ಹೌದು ಎಂದಾದರೆ ಇದಕ್ಕೆ ಜವಾಬ್ದಾರರು ಯಾರು? ಯಾರ ಆದೇಶದ ಮೇರೆಗೆ ಇವೆಲ್ಲ ನಡೆಯುತ್ತಿವೆ ಎಂದು ಸರ್ಕಾರವನ್ನ ಪ್ರಶ್ನಿಸಿದರು.
ಕಳೆದ ವರ್ಷ ಆಗಸ್ಟ್ನಲ್ಲಿ ಫೋನ್ ಟ್ಯಾಪಿಂಗ್ ವಿಚಾರ ಮುನ್ನಲೆಗೆ ಬಂದಿತ್ತು. ಈಗ ಅದರ ಬಗ್ಗೆ ಪ್ರತಿಕ್ರಿಯೆ ಬರುತ್ತಿದೆ. ಇದೊಂದು ಗಂಭೀರ ವಿಷಯವಾಗಿದೆ. ಸಿಎಂ ಈ ಬಗ್ಗೆ ಜವಾಬ್ದಾರಿಯನ್ನ ತೆಗೆದುಕೊಳ್ಳಬೇಕು ಹಾಗೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಒತ್ತಾಯಿಸಿದರು. ಅಷ್ಟೇ ಅಲ್ಲ ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸುವಂತೆ ಅವರು ಆಗ್ರಹಿಸಿದರು.
ಓದಿ: ದೇಶದಲ್ಲಿ ಕೊರೊನಾ ಹೆಚ್ಚಳ: ಮಾ.17ರಂದು ಸಿಎಂಗಳ ಜೊತೆ ಮೋದಿ ಮಹತ್ವದ ಚರ್ಚೆ
ಕಳೆದ ವರ್ಷ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿದ್ದ ಬಂಡಾಯದ ಬಳಿಕ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಬೆಂಬಲಿಗರ ಫೋನ್‌ಗಳನ್ನು ಟ್ಯಾಪ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸರ್ಕಾರದಿಂದ ಸರಿಯಾದ ಉತ್ತರ ಬಂದಿಲ್ಲ. ಹೀಗಾಗಿ, ಈ ಪ್ರಕರಣವನ್ನ ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಲಾಯಿತು. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ನಡೆದ ದೂರವಾಣಿ ಸಂಭಾಷಣೆ ಲೀಕ್ ಆಗಿ ದೊಡ್ಡ ಸದ್ದು ಮಾಡಿತ್ತು.