ನವದೆಹಲಿ : ಬಿಹಾರದ 3ನೇ ಹಂತದ ಚುನಾವಣಾ ಕಣದಲ್ಲಿ ಶೇ.31ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ. ಒಟ್ಟು 1,204 ಅಭ್ಯರ್ಥಿಗಳು ಕಣದಲ್ಲಿದ್ದು, ನವಂಬರ್ 7ರಂದು 3ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.
ಒಟ್ಟು 1,204 ಅಭ್ಯರ್ಥಿಗಳ 1,195 ಮಂದಿಯ ನಾಮಪತ್ರದ ಉಲ್ಲೇಖದ ಪ್ರಕಾರ ಎಡಿಆರ್ ವರದಿ ನೀಡಿದ್ದು, ಅದರಲ್ಲಿ ಸುಮಾರು 371 ಅಭ್ಯರ್ಥಿಗಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ. 3ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಆರ್ಜೆಡಿಯ ಒಟ್ಟು 44 ಅಭ್ಯರ್ಥಿಗಳ ಪೈಕಿ 32 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.
ಬಿಜೆಪಿಯ ಒಟ್ಟು 34 ಮಂದಿ ಅಭ್ಯರ್ಥಿಗಳ ಪೈಕಿ 26 ಅಭ್ಯರ್ಥಿಗಳು, ಕಾಂಗ್ರೆಸ್ನ 25 ರಲ್ಲಿ 19 ಅಭ್ಯರ್ಥಿಗಳು, ಎಲ್ಜೆಪಿಯ 42 ಅಭ್ಯರ್ಥಿಗಳಲ್ಲಿ 18 ಮಂದಿ, ಜೆಡಿಯುನ 37 ಮಂದಿಯಲ್ಲಿ 21 ಅಭ್ಯರ್ಥಿಗಳು, ಬಿಎಸ್ಪಿಯ 9ರಲ್ಲಿ 5 ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಇದರಲ್ಲಿ ಶೇ.24ರಷ್ಟು ಅಭ್ಯರ್ಥಿಗಳು ಅತ್ಯಾಚಾರ, ಕೊಲೆ, ಅಪಹರಣದಂತಹ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಶೇ.30ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು
ಬಿಹಾರದ 3ನೇ ಹಂತದ ಚುನಾವಣಾ ಕಣದಲ್ಲಿರುವ ಒಟ್ಟು 1,195 ಅಭ್ಯರ್ಥಿಗಳ ಪೈಕಿ 361 (ಶೇ.30ರಷ್ಟು) ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. 3ನೇ ಹಂತದ ಚುನಾವಣಾ ಕಣದಲ್ಲಿರುವ 1,195 ಮಂದಿ ಸರಾಸರಿ ಆಸ್ತಿಯು 1.47 ಕೋಟಿ ರೂಪಾಯಿಯಾಗಿದೆ ಎಂದು ವರದಿ ತಿಳಿಸಿದೆ.
ಇದರಲ್ಲಿ ಬಿಜೆಪಿಯ 34 ಅಭ್ಯರ್ಥಿಗಳ ಪೈಕಿ 31 ಮಂದಿ, ಕಾಂಗ್ರೆಸ್ನ 25ರಲ್ಲಿ 17 ಮಂದಿ, ಆರ್ಜೆಡಿಯ 44ರಲ್ಲಿ 35 ಮಂದಿ, ಜಡಿಯುಮ 37ರಲ್ಲಿ 30 ಮಂದಿ, ಎಲ್ಜೆಪಿಯ 42ರಲ್ಲಿ 31 ಮಂದಿ ಹಾಗೂ ಬಿಎಸ್ಪಿಯ 19ರಲ್ಲಿ 10 ಮಂದಿ ಅಭ್ಯರ್ಥಿಗಳು 1 ಕೋಟಿಗೂ ಅಧಿಕ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದಲ್ಲದೆ ಬಿಹಾರದ 2ನೇ ಹಂತದ ಚುನಾವಣಾ ಕಣದಲ್ಲೂ ಶೇ.34ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಆರೋಪ ಹೊಂದಿದ್ದವರರಾಗಿದ್ದರು. ಕ್ರಿಮಿನಲ್ ಹಿನ್ನಲೆಯುಳ್ಳ ಅಭ್ಯರ್ಥಿಗಳ ಕಣಕ್ಕಿಳಿಸುವ ಕುರಿತಂತೆ ಸುಪ್ರೀಂಕೋರ್ಟ್ ಫೆಬ್ರವರಿ 13, 2020ರಂದು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಇಂತಹ ಆಯ್ಕೆಗೆ ಕಾರಣಗಳನ್ನು ನೀಡುವಂತೆ ಸೂಚಿಸಿತ್ತು ಹಾಗೂ ಕ್ರಿಮಿನಲ್ ಆರೋಪವಿಲ್ಲದ ಇತರೆ ಅಭ್ಯರ್ಥಿಗಳನ್ನು ಏಕೆ ಆಯ್ಕೆ ಮಾಡಬಾರದು ಎಂದು ಸೂಚಿಸಿತ್ತು.