ಮಧ್ಯಪ್ರದೇಶ: ತನ್ನ ಪತ್ನಿನ್ನು ಆಸ್ಪತ್ರೆಗೆ ಕರೆದೊಯ್ಯಲು ಅಡ್ಡಿಯಾದ ಬೆಟ್ಟವನ್ನು ಕಡಿದು ರಸ್ತೆ ಮಾಡಿದ ಬಿಹಾರದ ಮೌಂಟೇನ್ ಮಾಂಜಿ ದೇಶಕ್ಕೇ ಮಾದರಿಯಾದರು. ಅದೇ ರೀತಿ ಮಧ್ಯಪ್ರದೇಶದ 250 ಮಹಿಳೆಯರು 18 ತಿಂಗಳುಗಳ ಕಾಲ ಶ್ರಮವಹಿಸಿ ಬೆಟ್ಟವನ್ನು ಕೊರೆದು ನೀರಿನ ಹಾಹಾಕಾರ ನೀಗಿಸಲು ಮುಂದಾಗಿದ್ದಾರೆ.
ಸ್ಥಳೀಯ ಮಹಿಳೆ ಬಬಿತಾ ರಜಪೂತ್ ಎಂಬವರು ಈ ಬಗ್ಗೆ ಮಾತನಾಡಿದ್ದು, "ನಾವು ಹಳ್ಳಿಗೆ ನೀರನ್ನು ಹರಿಸಲು ಸುಮಾರು 18 ತಿಂಗಳಿನಿಂದ ಶ್ರಮಿಸಿದ್ದೇವೆ. ಕಾಡಿನಲ್ಲಿ ಮುಕ್ತವಾಗಿ ಹರಿಯುತ್ತಿದ್ದ ನೀರನ್ನು ನಾಡಿನ ಜನತೆಯ ಬಳಕೆಗೆ ಉಪಯೋಗಿಸಲು ಮುಂದಾಗಿದ್ದೇವೆ. ಆದ್ದರಿಂದ, ಗ್ರಾಮದ ಮಹಿಳೆಯರು ಒಂದು ಗುಂಪನ್ನು ರಚಿಸಿ, ಬೆಟ್ಟವನ್ನು ಅರ್ಧ ಕಿಲೋಮೀಟರ್ ಕೊರೆದು ಹಳ್ಳಿಯ ಕೊಳಕ್ಕೆ ನೀರು ಹರಿಯುವಂತೆ ಮಾಡಲು ನಿರ್ಧರಿಸಿದೆವು" ಎಂದಿದ್ದಾರೆ.
ಆಂಗ್ರೊಥಾ ಗ್ರಾಮದ ವಿವಿತಾಬಾಯಿ ಆದಿವಾಸಿ ಎಂಬವರು ಮಾತನಾಡಿ "ಇಲ್ಲಿ ನೀರಿನ ಕೊರತೆ ಇದೆ. ನಮಗೆ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಜಾನುವಾರುಗಳೂ ಸಹ ತೊಂದರೆ ಅನುಭವಿಸುತ್ತಿತ್ತು. ಹೀಗಾಗಿ ನಮ್ಮ ಹಳ್ಳಿಯ ಕೊಳಕ್ಕೆ ನೀರು ಹರಿಯಲು ಸುಮಾರು 250 ಮಹಿಳೆಯರ ತಂಡ ಬೆಟ್ಟವನ್ನು ಅಗೆದಿದ್ದಾರೆ. ಈ ಕೆಲಸವನ್ನು ಪೂರ್ಣಗೊಳಿಸಲು ಸುಮಾರು 18 ತಿಂಗಳು ಬೇಕಾಯಿತು" ಎಂದರು.