ಜಮ್ಶೆಡ್ಪುರ್ (ಜಾರ್ಖಂಡ್): ದೇಶಾದ್ಯಂತ ಕೊರೊನಾ ಅಬ್ಬರ ಹಾಗೂ ಲಾಕ್ಡೌನ್ ಕಾರಣ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಸೈಕಲ್, ಬೈಕ್, ಸ್ಕೂಟರ್ಗಳ ಮೇಲೆ ತಮ್ಮ ಊರುಗಳಿಗೆ ಜನರು ಹೋಗುತ್ತಿರುವ ಘಟನೆ ಇಂದಿಗೂ ನಡೆಯುತ್ತಿವೆ.
ಕಳೆದ ನಾಲ್ಕು ತಿಂಗಳಿಂದ ಮುಂಬೈನಲ್ಲಿ ಸಿಲುಕಿಕೊಂಡಿದ್ದ ಸೋನಿಯಾ ದಾಸ್ ಸ್ಕೂಟರ್ನಲ್ಲೇ ಜಾರ್ಖಂಡ್ನ ಜಮ್ಶೆಡ್ಪುರ್ಕ್ಕೆ ತೆರಳಿದ್ದು, ಬರೋಬ್ಬರಿ 1800 ಕಿಲೋ ಮೀಟರ್ ಸ್ಕೂಟರ್ ಓಡಿಸಿದ್ದಾಳೆ.
ಮುಂಬೈ ಬಿಡುವುದಕ್ಕೂ ಮೊದಲು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹಾಗೂ ಬಾಲಿವುಡ್ ನಟ ಸೋನು ಸೂದ್ ಅವರ ಬಳಿ ಊರಿಗೆ ತೆರಳಲು ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದಳು. ಆದರೆ ಅವರಿಂದ ಯಾವುದೇ ರೀತಿಯ ಸಹಾಯ ಲಭ್ಯವಾಗದ ಕಾರಣ ಈ ನಿರ್ಧಾರ ಕೈಗೊಂಡಿದ್ದಾಳೆ.
ಸೋನಿಯಾ ಮುಂಬೈನಲ್ಲಿ ಪ್ರೊಡೆಕ್ಷನ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಇವರ ಪತಿ ಅಭಿಷೇಕ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಐದು ವರ್ಷದ ಮಗುವಿದೆ. ಲಾಕ್ಡೌನ್ ಕಾರಣ ಎಲ್ಲ ಶೂಟಿಂಗ್ ಕೆಲಸ ಸ್ಥಗಿತಗೊಂಡಿದ್ದ ಕಾರಣ ಇವರು ನಿರುದ್ಯೋಗಿಯಾಗಿದ್ದರು. ಜತೆಗೆ ಆರ್ಥಿಕ ಬಿಕ್ಕಟ್ಟಿನ ಕಾರಣ ಬಾಡಿಗೆ ಮನೆ ಬಿಟ್ಟು ಸ್ನೇಹಿತೆ ಸಬಿಯಾ ಮನೆಯಲ್ಲಿ ಉಳಿದುಕೊಂಡಿದ್ದಳು.
ಯಾವುದೇ ರೀತಿಯ ಸಹಾಯ ಲಭ್ಯವಾಗದ ಕಾರಣ ಸಬಿಯಾ ಜತೆ ಸ್ಕೂಟರ್ನಲ್ಲಿ ಜಾರ್ಖಂಡ್ಗೆ ಪ್ರಯಾಣ ಮಾಡಲು ನಿರ್ಧರಿಸಿದ್ದಾಳೆ. ಬೇರೆಯವರಿಂದ 5 ಸಾವಿರ ರೂ. ವ್ಯವಸ್ಥೆ ಮಾಡಿಕೊಂಡು ಜುಲೈ 21ರಂದು ಮುಂಬೈ ಬಿಟ್ಟಿದ್ದಾರೆ. ಜುಲೈ 22ರಂದು ರಾಯ್ಪುರ್ ತಲುಪುತ್ತಿದ್ದಂತೆ ಸರಿಯಾದ ದಾಖಲೆ ಮತ್ತು ವಾಹನದ ಪಾಸ್ ಇಲ್ಲದ ಕಾರಣ ತಡೆಹಿಡಿಯಲಾಗಿದೆ. ಅದು ಅಲ್ಲೇ ಉಳಿದುಕೊಂಡು ಮರುದಿನ ಪಾಸ್ ವ್ಯವಸ್ಥೆ ಮಾಡಿಕೊಂಡು ಮತ್ತೆ ತಮ್ಮ ಪ್ರಯಾಣ ಆರಂಭಿಸಿದ್ದಾರೆ.ಇದೀಗ ಸುರಕ್ಷಿತವಾಗಿ ಜಮ್ಶೆಡ್ಪುರ ತಲುಪಿರುವ ಮಹಿಳೆ ತನ್ನ ಪ್ರಯಾಣದ ಬಗ್ಗೆ ಮಾಹಿತಿ ನೀಡಿದ್ದಾಳೆ.