ಶಹಜಹಾನಪುರ (ಉತ್ತರ ಪ್ರದೇಶ): ಹೆರಿಗೆಗಾಗಿ ಆಸ್ಪತ್ರೆಗೆ ಹೋಗುವಾಗ ರಸ್ತೆ ಮೇಲೆಯೇ ಹೆರಿಗೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಗರ್ಭಿಣಿ ಯನ್ನು ಸೈಕಲ್ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿರುವಾಗ ಈ ಘಟನೆ ಸಂಭವಿಸಿದೆ.
"ಏ.9 ರ ಸಂಜೆ ರಘುನಾಥಪುರ ಗ್ರಾಮದ ಮಹಿಳೆಯನ್ನು ಆಕೆಯ ಪತಿ ಸೈಕಲ್ ಮೇಲೆ 10 ಕಿಮೀ ದೂರದಲ್ಲಿರುವ ಮದ್ನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ದಂಪತಿ ಸುಮಾರು 5 ಕಿಮೀ ಕ್ರಮಿಸಿ ಸಿಕಂದರಪುರ ಗ್ರಾಮದ ಬಳಿ ತಲುಪಿದ ಸಮಯದಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ." ಎಂದು ಗ್ರಾಮೀಣ ಎಸ್ಪಿ ಅಪರ್ಣಾ ಗೌತಮ್ ತಿಳಿಸಿದ್ದಾರೆ.
ಮಹಿಳೆಗೆ ಹೆರಿಗೆಯಾಗಿದ್ದನ್ನು ನೋಡಿದ ದಾರಿ ಹೋಕರೊಬ್ಬರು ಪೊಲೀಸ್ ರೆಸ್ಪಾನ್ಸ್ ವ್ಯಾನ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವ್ಯಾನ್ನಲ್ಲಿ ಮಹಿಳೆಯನ್ನು ಸಾಗಿಸಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.
"ಘಟನೆ ನಡೆದ ಸ್ಥಳಕ್ಕೆ ಹತ್ತಿರದಲ್ಲೇ ಇದ್ದ ಪೊಲೀಸ್ ರೆಸ್ಪಾನ್ಸ್ ವ್ಯಾನ್ ಸಿಬ್ಬಂದಿ ಮೀತು ತೋಮರ್, ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನ ಕರೆದುಕೊಂಡು ಹೋಗಿ, ಹೆರಿಗೆಯಾದ ಮಹಿಳೆಯನ್ನು ಮದ್ನಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ." ಎಂದು ಅಪರ್ಣಾ ಗೌತಮ್ ಮಾಹಿತಿ ನೀಡಿದರು.