ವಾರಣಾಸಿ : ದೇವ್ ದೀಪಾವಳಿ ಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡುವ ಹಿನ್ನಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಂದು ದಿನ ಮೊದಲು ಭದ್ರತಾ ಸಿಬ್ಬಂದಿಯ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ವೊಬ್ಬರ ವರದಿ ಪಾಸಿಟಿವ್ ಬಂದಿದೆ.
ಪ್ರಧಾನಿ ನರೇಂದ್ರ ಮೋದಿಯವರ ರಕ್ಷಣೆಯಲ್ಲಿ ತೊಡಗಿರುವ 6,000 ಭದ್ರತಾ ಸಿಬ್ಬಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಉಳಿದ ಇತರ ಭದ್ರತಾ ಸಿಬ್ಬಂದಿಯ ವರದಿಯು ನೆಗೆಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದಿರುವ ಮಹಿಳಾ ಕಾನ್‌ಸ್ಟೇಬಲ್ ಇಎಸ್‌ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಜೂರಿ ಗ್ರಾಮದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಭಾಗವಹಿಸುವುದನ್ನು ಗಮನದಲ್ಲಿಟ್ಟುಕೊಂಡು ವೇದಿಕೆಯಿಂದ ಒಂದು ಕಿಲೋಮೀಟರ್ ಒಳಗೆ ಭದ್ರತೆ ಬಿಗಿಗೊಳಿಸಲಾಗಿದೆ.
ವೇದಿಕೆ ಸುತ್ತಮುತ್ತ ಹೊರಗಿನವರ ಆಗಮನವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಸ್ಥಳದಲ್ಲಿ ಕೇಂದ್ರ ಮೀಸಲು ಭದ್ರತಾ ಪಡೆ ಮತ್ತು ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಎಸ್‌ಪಿಜಿ ಸೇರಿದಂತೆ ಗುಪ್ತಚರ ಇಲಾಖೆ ಈಗಾಗಲೇ ಎಚ್ಚರದಲ್ಲಿದೆ.