ಮುಂಬೈ: ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಸರ್ಕಾರ ಯಾವುದೇ ನಿಯಂತ್ರಣ ಹೇರುತ್ತಿಲ್ಲ ಎಂಬ ವಿಚಾರಕ್ಕೆ ಬಾಂಬೆ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಅಲ್ಲದೆ ಟಿವಿ ಸುದ್ದಿಗಳನ್ನು ರಾಜ್ಯ ಸರ್ಕಾರವು ಏಕೆ ನಿಯಂತ್ರಿಸಬಾರದು ಎಂದು ಪ್ರಶ್ನಿಸಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ನೇತೃತ್ವದ ನ್ಯಾಯಪೀಠವು, ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರಗಳನ್ನು ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿತು. ಈ ವೇಳೆ ಸುಶಾಂತ್ ಸಾವು ಪ್ರಕರಣ ಸಂಬಂಧ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳ ಮೇಲೆ ನಿಯಂತ್ರಣ ಹೇರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೋರ್ಟ್, ಸರ್ಕಾರ ಈ ವಿಚಾರವಾಗಿ ಟಿವಿ ಮಾಧ್ಯಮಗಳ ಮೇಲೆ ಏಕೆ ನಿಯಂತ್ರಣ ಹೇರಬಾರದು ಎಂದು ಪ್ರಶ್ನಿಸಿದೆ.
ಈ ವಿಚಾರವಾಗಿ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಮೇಲಿನ ನಿಯಂತ್ರಣದ ವ್ಯಾಪ್ತಿಯ ಬಗ್ಗೆ ಸೂಕ್ತ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವಕ್ಕೆ ನಿರ್ದೇಶನ ನೀಡಿದೆ. ಮುಖ್ಯವಾಗಿ ತುಂಬಾ ಪರಿಣಾಮಕಾರಿಯಾಗಿರುವ ಸುದ್ದಿಗಳ ಬಗ್ಗೆ ವಿಶೇಷವಾಗಿ ಗಮನಿಸುವಂತೆ ಕೋರ್ಟ್ ಸೂಚಿಸಿದೆ.