ಬರಾಬಂಕಿ (ಉತ್ತರಪ್ರದೇಶ): ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಹಥ್ರಾಸ್ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಸಾವು ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ನಾಲ್ವರು ಮೇಲ್ಜಾತಿಯ ವ್ಯಕ್ತಿಗಳು 'ನಿರಪರಾಧಿಗಳು' ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ವಿವಾದಿತ ನಾಯಕ ರಂಜಿತ್ ಬಹದ್ಧೂರ್ ಶ್ರೀವಾತ್ಸವ ತಮ್ಮ ವಿರುದ್ಧ 44ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ಮಂಗಳವಾರ ರಾತ್ರಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಹಥ್ರಾಸ್ ಸಂತ್ರಸ್ತೆ, ಅರೋಪಿಯೊಂದಿಗೆ ಸಂಬಂಧ ಹೊಂದಿದ್ದಳು. ಅಂದು ಘಟನೆ ನಡೆದ ಸ್ಥಳಕ್ಕೆ ಆಕೆಯೇ ಆರೋಪಿಯನ್ನು ಕರೆದಿದ್ದಳು ಎಂದು ಆರೋಪಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವ ಶ್ರೀವಾಸ್ತವ, 'ಆಕೆ ಸಂಬಂಧ ಹೊಂದಿದ್ದರಿಂದ ಬಾಲಕನನ್ನು ಮೈದಾನಕ್ಕೆ ಕರೆಸಿಕೊಂಡಿರಬೇಕು. ಈ ಸುದ್ದಿ ಈಗಾಗಲೇ ಸೋಷಿಯಲ್ ಮೀಡಿಯಾ ಮತ್ತು ನ್ಯೂಸ್ ಚಾನೆಲ್‌ಗಳಲ್ಲಿ ಹೊರಬಿದ್ದಿದೆ. ಆ ನಂತರ ಅವಳು ಸಿಕ್ಕಿಬಿದ್ದಿರಬೇಕು' ಎಂದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಶ್ರೀವಾತ್ಸವ್, ಅಂತಹ ಮಹಿಳೆಯರು ಕೆಲವು ನಿರ್ದಿಷ್ಟ ತಾಣಗಳಲ್ಲಿ ಸತ್ತಿದ್ದಾರೆ. ಕಬ್ಬು, ಜೋಳ ಮತ್ತು ರಾಗಿ ಹೊಲಗಳಲ್ಲಿ ಅಥವಾ ಪೊದೆಗಳು, ಗಟಾರಗಳು ಅಥವಾ ಕಾಡುಗಳಲ್ಲಿ ಸತ್ತರು. ಆದರೆ ಭತ್ತ ಅಥವಾ ಗೋಧಿ ಹೊಲಗಳಲ್ಲಿ ಏಕೆ ಸತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕಬ್ಬು, ಜೋಳ ಮತ್ತು ರಾಗಿ ಮುಂತಾದ ಬೆಳೆಗಳು ಎತ್ತರವಾಗಿ ಬೆಳೆಯುತ್ತವೆ. ಅಲ್ಲಿ ವ್ಯಕ್ತಿಗಳನ್ನು ಮರೆ ಮಾಡಬಹುದು. ಆದರೆ ಗೋಧಿ ಮತ್ತು ಭತ್ತ ಕೇವಲ ಮೂರು ಅಥವಾ ನಾಲ್ಕು ಅಡಿ ಎತ್ತರಕ್ಕೆ ಬೆಳೆಯುತ್ತದೆ ಎಂದಿದ್ದಾರೆ.
ಅಂತಹ ಅಪರಾಧಗಳು ಸಂಭವಿಸಿದಾಗ ಸಂತ್ರಸ್ತೆ ಅಥವಾ ಬಲಿಪಶುವನ್ನು ಅಪರಾಧ ಸ್ಥಳಕ್ಕೆ ಎಳೆದೊಯ್ಯುವುದನ್ನು ನೋಡಿದವರು ಯಾರೂ ಇರುವುದಿಲ್ಲ ಎಂದಿದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸುವವರೆಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಶ್ರೀವಾಸ್ತವ ಆರೋಪಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಬಂಧಿತರು ನಿರಪರಾಧಿಗಳು ಎಂದು ನಾನು ಖಚಿತವಾಗಿ ಹೇಳಬಲ್ಲೆ. ಸರಿಯಾದ ಸಮಯಕ್ಕೆ ಬಿಡುಗಡೆಯಾಗದಿದ್ದಲ್ಲಿ ಅವರು ಮಾನಸಿಕ ಕಿರುಕುಳವನ್ನು ಎದುರಿಸುತ್ತಲೇ ಇರುತ್ತಾರೆ ಎಂದಿದ್ದಾರೆ.
ಶ್ರೀವಾಸ್ತವ ಅವರ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, 'ಅವರು ಯಾವುದೇ ಪಕ್ಷದ ನಾಯಕ ಎಂದು ಕರೆಯಲು ಯೋಗ್ಯರಲ್ಲ. ಅವರು ತಮ್ಮ ಅನಾರೋಗ್ಯದ ಮನೋಭಾವವನ್ನು ತೋರಿಸುತ್ತಿದ್ದಾರೆ. ನಾನು ಅವರಿಗೆ ನೋಟಿಸ್ ಕಳುಹಿಸುತ್ತೇನೆ' ಎಂದು ಹೇಳಿದ್ದಾರೆ.