ಹೈದರಾಬಾದ್: ಭಾರತದ ಮುಕುಟಮಣಿ ಎಂದೇ ಬಣ್ಣಿಸಲಾಗುವ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದಾಗಿದೆ. ಕೇಂದ್ರದ ದಿಟ್ಟ ನಿರ್ಧಾರಕ್ಕೆ ದೇಶಾದ್ಯಂತ ಸಂಭ್ರಮಾಚರಣೆಯೂ ಜೋರಾಗಿ ಸಾಗಿದೆ. ಆದರೆ ಭಾರತದ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರವೇ ಇಂತಹ ವಿಶೇಷ ಸ್ಥಾನಮಾನ ನೀಡಲಾಗಿಲ್ಲ ಅನ್ನೋದನ್ನ ನೀವು ಒಪ್ಪಿಕೊಳ್ಳಲೇ ಬೇಕು.
ಹೌದು, 370 ವಿಧಿ ರದ್ದತಿಗೆ ಹರ್ಷೋದ್ಘಾರ ದೇಶಾದ್ಯಂತ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಪರ-ವಿರೋಧದ ಚರ್ಚೆಗಳಾಗುತ್ತಿವೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಹೀಗಾಗಿ ಅದಕ್ಕೆ ಉನ್ನತ ಸ್ಥಾನಮಾನಗಳನನ್ನು ಒದಗಿಸುವ ಅಗತ್ಯವಿಲ್ಲ ಎಂಬ ವಾದ ಜನರದ್ದು. ಆದರೆ, ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ದೇಶದ ಇತರ ಕೆಲ ರಾಜ್ಯಗಳಿಗೂ ಇಂತಹದೇ ಕೆಲ ವಿಶೇಷ ಸ್ಥಾನಮಾನವನ್ನು ಭಾರತೀಯ ಸಂವಿಧಾನದಲ್ಲಿ ನೀಡಲಾಗಿದೆ. ಆ ಹತ್ತು ರಾಜ್ಯಗಳು ಯಾವುವು ಮತ್ತು ಅದಕ್ಕೆ ನೀಡಿರುವ ವಿಭಿನ್ನ ಸ್ಥಾನಮಾನಗಳು ಯಾವುವು ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.
ಈಶಾನ್ಯ ಭಾರತದ ಕೆಲ ರಾಜ್ಯಗಳಿಗೆ ಭಾರತೀಯ ಸಂವಿಧಾನದ 371 ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಸೆಕ್ಷನ್ 371 ರ ಎ-ಜೆ ಸೆಕ್ಷನ್ ಅಡಿ ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.
ಆರ್ಟಿಕಲ್ 371-ಎ - ನಾಗಾಲ್ಯಾಂಡ್
ಆರ್ಟಿಕಲ್ 371 ಎ ಪ್ರಕಾರ, ಸಂಸತ್ತಿನ ಯಾವುದೇ ಕಾಯಿದೆ ನಾಗಾಲ್ಯಾಂಡ್ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ವಿಶೇಷವಾಗಿ ನಾಗಾಲ್ಯಾಂಡ್ ನಾಗರಿಕರ(ನಾಗಾಗಳು) ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳು, ಅದರ ಕಾನೂನುಗಳು ಮತ್ತು ಕಾರ್ಯವಿಧಾನಗಳು, ಇಲ್ಲಿನ ಜನರ ಸಾಂಪ್ರದಾಯಿಕ ಕಾನೂನು, ಮಾಲೀಕತ್ವ ಸೇರಿದಂತೆ ಭೂಮಿ ಮತ್ತು ಭೂ ಸಂಪನ್ಮೂಲಗಳ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಕಾಯಿದೆ ಸಂಸತ್ತಿನಲ್ಲಿ ಪಾಸ್ ಆದರೂ, ಅದು ನಾಗಾಲ್ಯಾಂಡ್‌ಗೆ ಅನ್ವಯಿಸುವುದಿಲ್ಲ.
ಒಂದು ವೇಳೆ, ರಾಜ್ಯ ವಿಧಾನಸಭೆಯು ಈ ಸಂಬಂಧಿತ ನಿರ್ಣಯವನ್ನು ಅಂಗೀಕರಿಸಿದರೆ, ಆ ಬಳಿಕವೇ ಇದು ನಾಗಾಲ್ಯಾಂಡ್‌ಗೆ ಅನ್ವಯಿಸುತ್ತದೆ ಎಂದು ಆರ್ಟಿಕಲ್ 371 ಎ ತಿಳಿಸುತ್ತದೆ. ಇನ್ನು ನಾಗಾಲ್ಯಾಂಡ್ ರಾಜ್ಯದಲ್ಲಿನ ಭೂಮಿ ಮತ್ತು ಅದರ ಸಂಪನ್ಮೂಲಗಳು ಜನರಿಗೆ ಸೇರಿವೆಯೇ ಹೊರತು ಸರ್ಕಾರಕ್ಕೆ ಸೇರಿಲ್ಲ ಎಂದು ಈ ಆರ್ಟಿಕಲ್ ಹೇಳುತ್ತದೆ.
ಆರ್ಟಿಕಲ್ 371 ಬಿ - ಅಸ್ಸಾಂ
ಈ ವಿಧಿಯು ಅಸ್ಸಾಂನ ಬುಡಕಟ್ಟು ಜನಾಂಗಕ್ಕೆ ಸ್ವಾಯತ್ತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿದೆ. ಇಲ್ಲಿನ ಬುಡಕಟ್ಟು ಪ್ರದೇಶಗಳಿಂದ ಚುನಾಯಿತರಾದ ಸದಸ್ಯರನ್ನು ಒಳಗೊಂಡ ರಾಜ್ಯದ ವಿಧಾನಸಭೆ ಸಮಿತಿಯ ಸಂವಿಧಾನ ಮತ್ತು ಕಾರ್ಯಗಳಿಗೆ ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆರ್ಟಿಕಲ್ 371 ಬಿ ಯ ಅಡಿಯಲ್ಲಿ ರಾಷ್ಟ್ರಪತಿಗಳು ಒದಗಿಸಬಹುದಾಗಿದೆ.
ಆರ್ಟಿಕಲ್ 371 ಸಿ - ಮಣಿಪುರ
ಮಣಿಪುರಕ್ಕೆ ಅನ್ವಯಿಸುವ ವಿಧಿ 371 ಸಿ ಕೂಡಾ, ಅಸ್ಸಾಂ ರಾಜ್ಯಕ್ಕಿರುವ ವಿಧಿ 371 ಬಿ ಯಂತೆಯೇ ಇದ್ದು, ರಾಜ್ಯದ ವಿಧಾನಸಭೆಯ ಸಮಿತಿಯ ಸಂವಿಧಾನ ಮತ್ತು ಕಾರ್ಯಗಳಿಗಾಗಿ ರಾಷ್ಟ್ರಪತಿಗಳು ಸ್ವಾಯತ್ತತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಬಹುದು. ಆದರೆ ಮಣಿಪುರದ ಬೆಟ್ಟ ಪ್ರದೇಶಗಳಿಂದ ಆಯ್ಕೆಯಾದ ಚುನಾಯಿತರಾದ ಸದಸ್ಯರಿಗೆ ಮಾತ್ರವೇ ಈ ವಿಧಿ ಅನ್ವಯಿಸುತ್ತದೆ. ಇದಕ್ಕಾಗಿ ಬೆಟ್ಟ ಪ್ರದೇಶಗಳ ಆಡಳಿತ ವೈಖರಿ ಬಗ್ಗೆ ಮಣಿಪುರ ರಾಜ್ಯಪಾಲರು ವಾರ್ಷಿಕ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕಾಗುತ್ತದೆ.
ಆರ್ಟಿಕಲ್ 371 ಡಿ & ಇ - ಆಂಧ್ರಪ್ರದೇಶ
ಈ ವಿಧಿಯು ಭಾರತೀಯ ಸಂವಿಧಾನಕ್ಕೆ 1974ರಲ್ಲಿ ಸೇರ್ಪಡೆಯಾಗಿದ್ದು, ಇದು ಆಂಧ್ರ ಪ್ರದೇಶದ ಜನರಿಗೆ ಸಮಾನ ಅವಕಾಶ ಮತ್ತು ಸೌಲಭ್ಯವನ್ನು ಕೊಟ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಜನರ ಹಕ್ಕುಗಳನ್ನು ಕಾಪಾಡುತ್ತದೆ.
ಆರ್ಟಿಕಲ್ 371 ಇ ಹೇಳುವಂತೆ, ಸಂಸತ್ತು ಕಾನೂನಿನ ಪ್ರಕಾರ ಆಂಧ್ರಪ್ರದೇಶದಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ .
ಆರ್ಟಿಕಲ್ 371 ಎಫ್ - ಸಿಕ್ಕಿಂ
ಆರ್ಟಿಕಲ್ 371 ಎಫ್, 1975 ರಲ್ಲಿ ಸಂಯೋಜಿಸಲಾಯ್ತು. ಈ ರಾಜ್ಯದಲ್ಲಿ ವಿಧಾನಸಭೆಯು 30 ಸದಸ್ಯರಿಗಿಂತ ಹೆಚ್ಚು ಸದಸ್ಯರನ್ನು ಹೊಂದಿರುತ್ತದೆ. ಇಲ್ಲಿನ ವಿವಿಧ ಸಮುದಾಯಗಳ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಸಲುವಾಗಿ, ವಿವಿಧ ವಿಭಾಗಗಳ ಜನರಿಗೆ ವಿಧಾನಸಭೆಯಲ್ಲಿ ಆಸನಗಳನ್ನು ಒದಗಿಸಲಾಗಿದೆ.
ಆರ್ಟಿಕಲ್ 371 ಜಿ - ಮಿಜೋರಾಂ
ಆರ್ಟಿಕಲ್ 371 ಜಿ, ನಾಗಾಲ್ಯಾಂಡ್ ರಾಜ್ಯಕ್ಕಿರುವ ಆರ್ಟಿಕಲ್ 371 ಎ ವಿಧಿಯನ್ನೇ ಹೋಲುತ್ತದೆ. ಆರ್ಟಿಕಲ್ 371 ಜಿ ಪ್ರಕಾರ, ಸಂಸತ್ತಿನ ಯಾವುದೇ ಕಾಯಿದೆ ಮಿಜೋರಾಂ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ವಿಶೇಷವಾಗಿ ಮಿಜೋರಾಂ ನಾಗರಿಕರ(ಮಿಜೋಗಳು) ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳು, ಅದರ ಕಾನೂನುಗಳು ಮತ್ತು ಕಾರ್ಯವಿಧಾನಗಳು, ಇಲ್ಲಿನ ಜನರ ಸಾಂಪ್ರದಾಯಿಕ ಕಾನೂನು, ಮಾಲೀಕತ್ವ ಸೇರಿದಂತೆ ಭೂಮಿ ಮತ್ತು ಭೂ ಸಂಪನ್ಮೂಲಗಳ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಕಾಯಿದೆ ಸಂಸತ್ತಿನಲ್ಲಿ ಪಾಸ್ ಆದರೂ ನಾಗಾಲ್ಯಾಂಡ್‌ಗೆ ಅನ್ವಯಿಸುವುದಿಲ್ಲ.
ಆರ್ಟಿಕಲ್ 371 ಹೆಚ್ - ಅರುಣಾಚಲ ಪ್ರದೇಶ
ಈ ವಿಧಿಯ ಪ್ರಕಾರ ಅರುಣಾಚಲ ಪ್ರದೇಶದ ರಾಜ್ಯಪಾಲರಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಇಲ್ಲಿನ ರಾಜ್ಯಪಾಲರು ಅದೇ ರಾಜ್ಯದ ಮುಖ್ಯಮಂತ್ರಿಗಳ ನಿರ್ಧಾರವನ್ನು ರದ್ದುಪಡಿಸಬಹುದು.
ಆರ್ಟಿಕಲ್ 371 ಐ - ಗೋವಾ
ಆರ್ಟಿಕಲ್ 371 ಐ ಪ್ರಕಾರ ಗೋವಾ ರಾಜ್ಯದ ವಿಧಾನಸಭೆ ಸದಸ್ಯರ ಮಿತಿ 30ಕ್ಕಿಂತ ಕಡಿಮೆಯಿರಬಾರದು.
ಆರ್ಟಿಕಲ್ 371 ಜೆ
ಆರ್ಟಿಕಲ್ 371 ಜೆ, ಹೈದರಾಬಾದ್ ಕರ್ನಾಟಕ ಪ್ರಾಂತ್ಯದ 6 ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. ಇದಕ್ಕಾಗಿ ಮಹಾರಾಷ್ಟ್ರ ಹಾಗೂ ಗುಜರಾತ್ ಮಾದರಿಯಲ್ಲಿ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ಈ ಪ್ರದೇಶದಲ್ಲಿ ಸ್ಥಾಪಸಬೇಕು. ಸದ್ಯ ಕರ್ನಾಟಕದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು 2013ರಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಲಾಗಿದೆ. ಇದು ಈ ಭಾಗದ ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಿಗಿರಿ ಜಿಲ್ಲೆಗಳಿಗೆ ಅನ್ವಯಿಸುತ್ತದೆ.
ಈ ವಿಧಿಯ ಮೂಲಕ ಈ ಜಿಲ್ಲೆಯ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯ ಮೀಸಲಾತಿಯನ್ನು ನೀಡಲಾಗುತ್ತದೆ.
ಉಳಿದಂತೆ ವಿದರ್ಭ, ಮಹಾರಾಷ್ಟ್ರದ ಮರಾಠವಾಡ ಪ್ರದೇಶಗಳು, ರಾಜ್ಯದ ಉಳಿದ ಭಾಗಗಳು ಮತ್ತು ಸೌರಾಷ್ಟ್ರ, ಕಚ್ ಹಾಗೂ ಗುಜರಾತ್‌ನ ಉಳಿದ ಭಾಗಗಳಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುತ್ತದೆ.
ಆಂಧ್ರಪ್ರದೇಶ, ಕರ್ನಾಟಕ, ಗೋವಾಕ್ಕೆ ಸಂಬಂಧಿಸಿದ ವಿಶೇಷ ನಿಬಂಧನೆಗಳನ್ನು ಕ್ರಮವಾಗಿ 371-ಡಿ ಮತ್ತು 371-ಇ, 371 ಜೆ, 371 ಐ ವಿಧಿಗಳಲ್ಲಿ ಪರಿಗಣಿಸಲಾಗಿದೆ.