ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಈಶಾನ್ಯ ದೆಹಲಿ ಹೊತ್ತಿ ಉರಿದಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಹರಸಾಹಸ ಪಟ್ಟಿದ್ದು, ಕಳೆದೆರೆಡು ದಿನಗಳಿಂದ ಕೆಲವೊಂದು ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಹಿಂಸಾಚಾರದ ಸಂದರ್ಭದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ವಿವಿಧ ಕೋಮುಗಳ ನಡುವೆ ಗಲಭೆ ಉಂಟಾಗಿ, ಸಮುದಾಯಗಳ ನಡುವಿನ ಬಾಂಧವ್ಯ ಹಾಳಾಗಿದೆ. ಆದರೆ ಕರವಾಲ್ ನಗರದಲ್ಲಿ ದೊಡ್ಡ ಪ್ರಮಾಣದ ಗಲಭೆ ನಡೆದಿದ್ದರೂ ಅಲ್ಲಿನ ಸಮುದಾಯಗಳ ನಡುವೆ ಯಾವುದೇ ರೀತಿಯ ಮನಸ್ತಾಪ ಉಂಟಾಗಿಲ್ಲ.
ಹಿಂಸಾಚಾರದ ವೇಳೆ, ಈ ಪ್ರದೇಶದಲ್ಲಿ ವಾಹನ, ಅಂಗಡಿ, ಮನೆ ಹಾಗೂ ಸ್ಥಳೀಯ ಶಾಲೆಯೊಂದಕ್ಕೆ ಬೆಂಕಿ ಹಚ್ಚಿ ಧ್ವಂಸಗೊಳಿಸಲಾಗಿದೆ. ಇದರ ಮಧ್ಯೆ ಕೂಡ ಹಲವರ ಆಸ್ತಿ-ಪಾಸ್ತಿ ಉಳಿಸಲು ಸ್ಥಳೀಯರು ಹರಸಾಹಸಪಟ್ಟಿದ್ದು, ಈ ವೇಳೆ, ಅದು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ವಿಚಾರ ಮಾಡಿಲ್ಲ.
ಕೆಲವೊಂದು ಹಿಂದೂ ಕುಟುಂಬಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಆಸ್ತಿ-ಪಾಸ್ತಿ ರಕ್ಷಣೆ ಮಾಡಿದ್ರೆ, ಕೆಲ ಮುಸ್ಲಿಮರು ಪ್ರಾಣದ ಹಂಗು ತೊರೆದು ಹಿಂದೂಗಳ ಜೀವ ರಕ್ಷಣೆ ಮಾಡಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಸ್ಥಳೀಯ ಹಾಜಿ ನಾಸಿರುದ್ದೀನ್, ಸುಮಾರು ಸಾವಿರಾರು ಜನರು ಮುಖವಾಡ ಹಾಕಿಕೊಂಡು ನಮ್ಮತ್ತ ಓಡಿ ಬಂದರು. ಈ ವೇಳೆ, ಅಂಗಡಿಗಳಿಗೆ ಬೆಂಕಿ ಹಚ್ಚಿ, ವಾಹನಗಳನ್ನು ಸುಟ್ಟು ಹಾಕಿದರು. ಈ ವೇಳೆ, ಕೆಲ ಹಿಂದೂ ಸಹೋದರರು ನನ್ನ ಕುಟುಂಬದ ರಕ್ಷಣೆ ಮಾಡಿ, ತಮ್ಮ ಮನೆಗೆ ಕರೆದುಕೊಂಡು ಹೋದರು ಎಂದು ಹೇಳಿಕೊಂಡಿದ್ದಾರೆ.